ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರ ಕುಟುಂಬ ಮತ್ತು ಅವರ ಪರಮಾಪ್ತ ನಟ ಧನ್ವೀರ್ ಗೌಡ ನಡುವಿನ ಮುಸುಕಿನ ಗುದ್ದಾಟ ಇದೀಗ ಬೀದಿಗೆ ಬಂದು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರಿಗೊಬ್ಬರು ಟಾಂಗ್ ಕೊಡುವ ರೀತಿಯಲ್ಲಿ ಪರೋಕ್ಷವಾಗಿ ಇನ್‌ಸ್ಟಾಗ್ರಾಮ್ ಸ್ಟೋರಿಗಳನ್ನು ಹಾಕಿ ಸಂಚಲನ ಮೂಡಿಸಿದ್ದ ಈ ಇಬ್ಬರ ನಡುವಿನ ಶೀತಲ ಸಮರ, ಈಗ ಪರಸ್ಪರ ದೂರು ಮತ್ತು ಎನ್‌ಸಿಆರ್ (NCR) ದಾಖಲಾಗುವ ಹಂತಕ್ಕೆ ತಲುಪಿದೆ. ವಿಜಯಲಕ್ಷ್ಮಿ ಅವರ ಮ್ಯಾನೇಜರ್ ಧನ್ವೀರ್ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೆ, ಇತ್ತ ಧನ್ವೀರ್ ತಂದೆ ತಿಮ್ಮೇಗೌಡ ಅವರು ವಿಜಯಲಕ್ಷ್ಮಿ ಸೇರಿದಂತೆ ನಾಲ್ವರ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ಗಲಾಟೆಯ ಆರೋಪದಡಿ ಗಂಭೀರ ಪ್ರತಿ ದೂರು ನೀಡಿದ್ದಾರೆ.
ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜ್ ನೀಡಿದ ದೂರಿನಲ್ಲೇನಿದೆ?
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿರುವ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜು, ನಟ ಧನ್ವೀರ್ ವಿರುದ್ಧ ಆಡಿಯೋ ಸಾಕ್ಷ್ಯ ಸಮೇತ ದೂರು ನೀಡಿದ್ದಾರೆ. ದೂರಿನ ಪ್ರಕಾರ: “ದಿನಾಂಕ 20.10.2026 ರಂದು ರಾತ್ರಿ 8:15ರ ಸುಮಾರಿಗೆ ನಾನು ಮತ್ತು ವಿಜಯಲಕ್ಷ್ಮಿ ಮೇಡಂ ಅವರು ನಟ ಧನ್ವೀರ್ ಅವರ ವ್ಯವಹಾರಿಕ ವಿಚಾರಗಳ ಬಗ್ಗೆ ಮಾತನಾಡಲು ಅವರ ಮನೆಗೆ ಹೋಗಿದ್ದೆವು. ಆ ವೇಳೆ ಧನ್ವೀರ್ ಅವರ ತಾಯಿಯೊಂದಿಗೆ ವಿಜಯಲಕ್ಷ್ಮಿ ಅವರು ಮಾತನಾಡುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಮನೆಯೊಳಗೆ ಹೋದಾಗ ನಾನೂ ಪ್ರವೇಶಿಸಿದೆ. ಆಗ ಧನ್ವೀರ್ ಅವರ ತಂದೆ ಹಾಗೂ ಅಪರಿಚಿತ ವ್ಯಕ್ತಿ ನನ್ನ ಮೇಲೆ ಕೂಗಾಡಿ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದರು. ಆ ಸಂದರ್ಭದಲ್ಲಿ ಧನ್ವೀರ್ ಸಿಗದ ಕಾರಣ ನಾವು ಅಲ್ಲಿಂದ ವಾಪಸ್ ಬಂದೆವು. ಆದರೆ ಅದೇ ದಿನ ರಾತ್ರಿ ಕರೆ ಮಾಡಿದ ಧನ್ವೀರ್, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಾಟ್ಸಾಪ್ ವಾಯ್ಸ್ ಮೆಸೇಜ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅಕ್ಟೋಬರ್ 21ರಂದೂ ಕುಟುಂಬ ಹಾಗೂ ವೈಯಕ್ತಿಕ ವಿಚಾರವಾಗಿ ನಿಂದನೀಯ ಸಂದೇಶ ಕಳುಹಿಸಿ ಮಾನಸಿಕ ಕಿರುಕುಳ ನೀಡಿದ್ದಾರೆ” ಎಂದು ಆರೋಪಿಸಿ ತನಿಖೆಗೆ ಕೋರಿದ್ದಾರೆ.
ರೌಡಿಗಳನ್ನು ಕರೆಸಿ ಜೀವ ಬೆದರಿಕೆ ಹಾಕಿದ್ದಾರೆ: ಧನ್ವೀರ್ ತಂದೆ ತಿಮ್ಮೇಗೌಡ ಪ್ರತಿ ದೂರು!
ಇನ್ನೊಂದೆಡೆ ನಟ ಧನ್ವೀರ್ ಅವರ ತಂದೆ ತಿಮ್ಮೇಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಿಜಯಲಕ್ಷ್ಮಿ, ಮ್ಯಾನೇಜರ್ ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ಎಂಬ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ. ತಿಮ್ಮೇಗೌಡರು ದಾಖಲಿಸಿರುವ ದೂರಿನ ಪ್ರಕಾರ: “ಅಕ್ಟೋಬರ್ 21ರಂದು ರಾತ್ರಿ ಸುಮಾರು 8:30ರ ವೇಳೆಯಲ್ಲಿ ಮಗ ಧನ್ವೀರ್ ಮೈಸೂರಿಗೆ ಹೋಗಿದ್ದ. ಮನೆಯಲ್ಲಿ ನಾನು, ನನ್ನ ಪತ್ನಿ ಜಿ. ಭಾರತಿ, ತಾಯಿ ಜಯಮ್ಮ ಹಾಗೂ ಮಗಳು ನಳಿನಾಕ್ಷಿ ಊಟ ಮಾಡುತ್ತಿದ್ದಾಗ ಯಾರೋ ಬೆಲ್ ಮಾಡಿದ್ದಾರೆ. ಬಾಗಿಲು ತೆರೆದಾಗ ಒಳಗೆ ನುಗ್ಗಿದ ವಿಜಯಲಕ್ಷ್ಮಿ ಹಾಗೂ ನಾಗರಾಜ್, ‘ಧನ್ವೀರ್ ಎಲ್ಲಿದ್ದಾನೆ, ಧನ್ವೀರ್ ಅಪ್ಪ ಎಲ್ಲಿದ್ದಾನೆ?’ ಎಂದು ಏರುಧ್ವನಿಯಲ್ಲಿ ಕೂಗಾಡಿದರು. ಮಗ ಊರಲ್ಲಿಲ್ಲ ಎಂದಾಗ, ಪಕ್ಕದ ಮನೆಯಲ್ಲಿದ್ದ ನನ್ನ ಅಕ್ಕನ ಮಗ ಅಜಯ್ ಗೌಡ ನಮ್ಮ ಮನೆಗೆ ಬಂದು ‘ಯಾಕೆ ಗಲಾಟೆ ಮಾಡ್ತಿದ್ದೀರಾ’ ಎಂದು ಪ್ರಶ್ನಿಸಿದ. ಆಗ ಮ್ಯಾನೇಜರ್ ನಾಗರಾಜ್, ಅಜಯ್‌ನನ್ನು ರೌಡಿ ಎಂದು ತಪ್ಪಾಗಿ ತಿಳಿದುಕೊಂಡು ‘ನೀವು ರೌಡಿಯನ್ನು ಕರಿಸುತ್ತೀರಾ, ಈಗ ನಾನು ರೌಡಿಗಳನ್ನು ಹೇಗೆ ಕರಿಸ್ತೀನಿ ನೋಡಿ’ ಎಂದು ಕೂಗಾಡಿ, ಗೌರವ್ ಶೆಟ್ಟಿ ಎಂಬಾತನಿಗೆ ಕರೆ ಮಾಡಿ ಭೋಜ ಮತ್ತು ಬಾಟಲಿ ಪ್ರಮೋದ್ ಎಂಬಿಬ್ಬರನ್ನು ಸ್ಥಳಕ್ಕೆ ಕರೆಯಿಸಿಕೊಂಡರು. ಮನೆಗೆ ಬಂದ ಆ ಇಬ್ಬರು ಜೋರು ಧ್ವನಿಯಲ್ಲಿ ಕೂಗಾಡಿ, ಧನ್ವೀರ್‌ನನ್ನು ಎಲ್ಲಿಗೆ ಕರೆಸಿ ಏನು ಮಾಡಬೇಕು ಅಂತ ನಮಗೆ ಗೊತ್ತಿದೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನಮಗೆ ಬೈದು ಜೀವ ಬೆದರಿಕೆ ಹಾಕಿದ ವಿಜಯಲಕ್ಷ್ಮಿ, ನಾಗರಾಜ್, ಭೋಜ ಹಾಗೂ ಬಾಟಲಿ ಪ್ರಮೋದ್ ವಿರುದ್ಧ ಕ್ರಮ ಕೈಗೊಂಡು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು” ಎಂದು ಮನವಿ ಮಾಡಿದ್ದಾರೆ.
ಆಪ್ತರ ನಡುವೆ ಕಿತ್ತಾಟ ಶುರುವಾಗಿದ್ದು ಏಕೆ?
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಪಾಲಾದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತು, ಕೋರ್ಟ್‌ನಿಂದ ಹಿಡಿದು ಜೈಲಿನವರೆಗೂ ನೆರಳಿನಂತೆ ಓಡಾಡಿಕೊಂಡಿದ್ದವರು ನಟ ಧನ್ವೀರ್ ಗೌಡ. ಆದರೆ ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಪರಸ್ಪರ ಮುಖಾಮುಖಿಯಾಗದೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ತಿರುಗೇಟು ನೀಡುವ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದರು. ಇದೀಗ ಪರಸ್ಪರ ಠಾಣೆಗಳಲ್ಲಿ ದೂರುಗಳು ದಾಖಲಾಗಿರುವುದರಿಂದ, ಇಬ್ಬರ ನಡುವಿನ ಈ ಬಿರುಕು ಮತ್ತು ವ್ಯಾಪಾರ-ವ್ಯವಹಾರದ ಅಸಲಿ ಸಂಘರ್ಷ ಗಾಂಧಿನಗರ ಸೇರಿದಂತೆ ಚಿತ್ರರಂಗದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ.













