ಕನ್ನಡ ಚಿತ್ರರಂಗದ ‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಸಾಲು ಸಾಲು ಭರ್ಜರಿ ಉಡುಗೊರೆಗಳು ಸಿಗುತ್ತಿವೆ. ಅವರ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಳ ಅಪ್‌ಡೇಟ್‌ಗಳು ಒಂದೊಂದಾಗಿ ಹೊರಬಂದಿದ್ದು, ಅದರಲ್ಲಿ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದು ‘ದೇವರಾಯ’ ಸಿನಿಮಾದ ಅಧಿಕೃತ ಪ್ರಕಟಣೆಯನ್ನ.
ಅಣ್ಣಾವ್ರ ಐತಿಹಾಸಿಕ ಹೆಜ್ಜೆಯಲ್ಲಿ ಕಿಚ್ಚ ಸುದೀಪ್
ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆದರೆ, ವರನಟ ಡಾ. ರಾಜ್‌ಕುಮಾರ್ ಅವರು ಅಭಿನಯಿಸಿದ ‘ಶ್ರೀ ಕೃಷ್ಣದೇವರಾಯ’ (1970) ಚಿತ್ರ ಇಂದಿಗೂ ಸಾರ್ವಕಾಲಿಕ ಶ್ರೇಷ್ಠ ಕ್ಲಾಸಿಕ್ ಆಗಿ ಉಳಿದಿದೆ. ಗಂಭೀರ ವ್ಯಕ್ತಿತ್ವ, ತೀಕ್ಷ್ಣ ಕಣ್ಣುಗಳು ಹಾಗೂ ರಾಜಗಾಂಭೀರ್ಯದ ಆ ಮಹಾನ್ ಚಕ್ರವರ್ತಿಯ ಪಾತ್ರವನ್ನು ಮತ್ಯಾರೂ ಮರುಸೃಷ್ಟಿಸಲು ಧೈರ್ಯ ಮಾಡಿರಲಿಲ್ಲ. ಇದೀಗ ಅಂತಹ ಜವಾಬ್ದಾರಿಯುತ ಹಾಗೂ ಐತಿಹಾಸಿಕ ಪಾತ್ರವನ್ನು ಕಿಚ್ಚ ಸುದೀಪ್ ನಿಭಾಯಿಸುತ್ತಿರುವುದು ಸಿನಿಪ್ರಿಯರಲ್ಲಿ ಮತ್ತು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ. ಸುದೀಪ್ ಅವರ ಕಂಚಿನ ಕಂಠ ಮತ್ತು ಆಕರ್ಷಕ ಮೈಕಟ್ಟು ರಾಜನ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ.
ಕನ್ನಡದ ಹೆಮ್ಮೆ ‘ವಿಜಯನಗರ ಸಾಮ್ರಾಜ್ಯ’ದ ಹಿನ್ನೆಲೆ
ದಕ್ಷಿಣ ಭಾರತದ ಇತಿಹಾಸದಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಆರ್ಥಿಕ ಸಮೃದ್ಧಿಯ ಸುವರ್ಣ ಯುಗವನ್ನು ಸ್ಥಾಪಿಸಿದ ಕೀರ್ತಿ ವಿಜಯನಗರ ಸಾಮ್ರಾಜ್ಯಕ್ಕೆ ಸಲ್ಲುತ್ತದೆ. 1336 ರಲ್ಲಿ ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ಥಾಪನೆಯಾದ ಈ ಸಾಮ್ರಾಜ್ಯವನ್ನು ತುಳುವ ವಂಶದ ಶ್ರೀ ಕೃಷ್ಣದೇವರಾಯರು (1509–1529) ಉತ್ತುಂಗಕ್ಕೇರಿಸಿದರು. ರಾಯರ ಕಾಲದಲ್ಲಿ ಹಂಪಿಯ ಮಾರುಕಟ್ಟೆಗಳಲ್ಲಿ ಮುತ್ತು-ರತ್ನಗಳನ್ನು ಅಳೆದು ಮಾರಲಾಗುತ್ತಿತ್ತು ಎಂಬ ಮಾತಿದೆ. ಶತ್ರುಗಳನ್ನು ಧೂಳೀಪಟ ಮಾಡಿದ ಅಪ್ರತಿಮ ಯುದ್ಧ ಕಲೆ, ಸಾಹಿತ್ಯ ಪ್ರೇಮ ಹಾಗೂ ತೆನಾಲಿ ರಾಮನಂತಹ ವಿದ್ವಾಂಸರನ್ನೊಳಗೊಂಡ ‘ಅಷ್ಟದಿಗ್ಗಜ’ ಆಸ್ಥಾನ ಈ ಸಾಮ್ರಾಜ್ಯದ ವೈಭವ. ಇಂತಹ ಭವ್ಯ ಇತಿಹಾಸವನ್ನು ಬೆಳ್ಳಿತೆರೆಯ ಮೇಲೆ ಕಟ್ಟಿಕೊಡುವುದು ಸಾಮಾನ್ಯದ ಮಾತಲ್ಲ.
ಭಾರಿ ಬಜೆಟ್ ಹಾಗೂ ಬಿಡುಗಡೆ ವಿವರ
ಈ ಚಿತ್ರವನ್ನು ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಹಾಗೂ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಅತ್ಯಂತ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸುತ್ತಿವೆ. ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿಪ್ರಸಾದ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರವು ಅತ್ಯುನ್ನತ ಮಟ್ಟದ ವಿಎಫ್‌ಎಕ್ಸ್ (VFX) ತಂತ್ರಜ್ಞಾನ ಹಾಗೂ ಅದ್ಭುತ ಸೆಟ್‌ಗಳೊಂದಿಗೆ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿದೆ. ಚಿತ್ರತಂಡದ ಮಾಹಿತಿ ಪ್ರಕಾರ ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ಸಿನಿಮಾ ತೆರೆಕಾಣುವ ಸಾಧ್ಯತೆಯಿದೆ. ಕನ್ನಡದ ಅಸ್ಮಿತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಎಲ್ಲಾ ಲಕ್ಷಣಗಳು ಈ ಪ್ರಾಜೆಕ್ಟ್‌ನಲ್ಲಿ ಕಾಣುತ್ತಿವೆ.








