ಜೋಮ್ಯಾಟೋ,ಸ್ವಿಗ್ಗಿ ಅಂತಹ ಆ್ಯಪ್ ಗಳಿಂದ ಆನ್ಲೈನ್ ಮೂಲಕ ಮನೆಯಲ್ಲೇ ಕುಳಿತು ಆಹಾರ ತರಿಸಿಕೊಳ್ಳುವವರಿಗೆ ಪ್ರಮುಖ ಫುಡ್ ಡೆಲಿವರಿ ಕಂಪನಿಗಳು ಮತ್ತೊಂದು ದೊಡ್ಡ ಆರ್ಥಿಕ ಹೊರೆ ಹೇರಲು ಮುಂದಾಗಿವೆ. ದೇಶದ ಪ್ರಮುಖ ಫುಡ್ ಡೆಲಿವರಿ ಆ್ಯಪ್ಗಳಾದ ಜೊಮ್ಯಾಟೊ (Zomato) ಮತ್ತು ಸ್ವಿಗ್ಗಿ (Swiggy) ದಿನೇ ದಿನೇ ಹೊಸ ಹೊಸ ಶುಲ್ಕಗಳನ್ನು ಪರಿಚಯಿಸುತ್ತಿದ್ದು, ಇದೀಗ ಜೊಮ್ಯಾಟೊ ‘ಕ್ಯಾಶ್ ಆನ್ ಡೆಲಿವರಿ’ (Cash on Delivery) ಆರ್ಡರ್ಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸಲು ಆರಂಭಿಸಿದೆ. ಈ ನಿರ್ಧಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಜೊಮ್ಯಾಟೊದ ‘ಪೇ ಆನ್ ಡೆಲಿವರಿ’ ಶುಲ್ಕ!
ಇತ್ತೀಚಿನ ವರದಿಗಳ ಪ್ರಕಾರ, ಜೊಮ್ಯಾಟೊ ಆ್ಯಪ್ನಲ್ಲಿ ಆಹಾರ ಆರ್ಡರ್ ಮಾಡಿ ಹಣವನ್ನು ಕ್ಯಾಶ್ ರೂಪದಲ್ಲಿ ನೀಡುವ (Pay on Delivery) ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ.
- ಶೇಕಡಾವಾರು ಲೆಕ್ಕಾಚಾರ: ಒಟ್ಟು ಆರ್ಡರ್ ಮೌಲ್ಯದ ಮೇಲೆ ಸುಮಾರು 2% ರಷ್ಟು ಮೊತ್ತವನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತಿದೆ.
- ಗರಿಷ್ಠ ಮಿತಿ: ಈ ಶುಲ್ಕವು ಗರಿಷ್ಠ 30 ರೂಪಾಯಿಗಳವರೆಗೆ ಇರಲಿದೆ.
- ಬಳಕೆದಾರರು ಹಂಚಿಕೊಂಡಿರುವ ಬಿಲ್ಗಳ ಪ್ರಕಾರ, ಈಗಾಗಲೇ ಪ್ರತಿ ಆರ್ಡರ್ಗೆ 5 ರೂಪಾಯಿಯಿಂದ 21 ರೂಪಾಯಿವರೆಗೆ ಹೆಚ್ಚುವರಿ ‘ಪೇ ಆನ್ ಡೆಲಿವರಿ ಫೀ’ ಸೇರ್ಪಡೆಯಾಗುತ್ತಿದೆ.
- ಆನ್ಲೈನ್ ಮೂಲಕ ಮೊದಲೇ (Prepaid – UPI/Card) ಹಣ ಪಾವತಿಸುವವರಿಗೆ ಈ ಶುಲ್ಕ ಇರುವುದಿಲ್ಲ.
ಕಂಪನಿಯ ವಾದ ಏನು!
ಕ್ಯಾಶ್ ಆನ್ ಡೆಲಿವರಿ ವೇಳೆ ಡೆಲಿವರಿ ಬಾಯ್ಗಳಿಗೆ ಚಿಲ್ಲರೆ ಹಣದ ಸಮಸ್ಯೆ, ಹಣ ಸಂಗ್ರಹಣೆಯಲ್ಲಿನ ರಿಸ್ಕ್ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಾಗುತ್ತದೆ ಎಂಬುದು ಕಂಪನಿಯ ವಾದ. ಹೀಗಾಗಿ ಜನರು ನಗದು ವ್ಯವಹಾರ ಬಿಟ್ಟು ಸಂಪೂರ್ಣವಾಗಿ ಡಿಜಿಟಲ್ ಪಾವತಿ (UPI ಅಥವಾ ಕಾರ್ಡ್) ಮಾಡಲಿ ಎಂಬ ಕಾರಣಕ್ಕೆ ಈ ದಂಡದಂತಹ ಶುಲ್ಕ ತರಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮೊದಲೇ ಜಿಎಸ್ಟಿ, ಪ್ಲಾಟ್ಫಾರ್ಮ್ ಫೀ ಕಟ್ಟುತ್ತಿರುವ ಸಾಮಾನ್ಯ ಜನರಿಗೆ ಇದು ಮತ್ತೊಂದು ಹೊರೆಯಾಗಿದೆ.
ರೆಸ್ಟೋರೆಂಟ್ ಬಿಲ್ vs ಸ್ವಿಗ್ಗಿ ಬಿಲ್: ವೈರಲ್ ಆದ ರಶೀದಿ
ಇದೇ ಸಂದರ್ಭದಲ್ಲಿ ‘X’ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿರುವ ಹೋಟೆಲ್ ಬಿಲ್ ಹಾಗೂ ಆನ್ಲೈನ್ ಆ್ಯಪ್ ಬಿಲ್ ನಡುವಿನ ವ್ಯತ್ಯಾಸ ಭಾರೀ ಚರ್ಚೆಗೆ ಗ್ರಾಸವಾಗಿದೆ.
- ನೇರವಾಗಿ ಹೋಟೆಲ್ಗೆ ಹೋಗಿ ತಿಂದಾಗ ಆಗುವ ಬಿಲ್ ಮೊತ್ತಕ್ಕೂ, ಅದೇ ಆಹಾರವನ್ನು ಸ್ವಿಗ್ಗಿ ಅಥವಾ ಜೊಮ್ಯಾಟೊದಲ್ಲಿ ಆರ್ಡರ್ ಮಾಡಿದಾಗ ಆಗುವ ಮೊತ್ತಕ್ಕೂ ಆಕಾಶ-ಭೂಮಿಯಷ್ಟು ವ್ಯತ್ಯಾಸವಿದೆ.
- ಹೋಟೆಲ್ನಲ್ಲೇ 230 ರೂಪಾಯಿಗೆ ಸಿಗುವ ತಿಂಡಿಗೆ, ಆನ್ಲೈನ್ನಲ್ಲಿ ಮೂಲ ಬೆಲೆಯನ್ನೇ ಹೆಚ್ಚಿಸಿ, ಅದರ ಮೇಲೆ ಡೆಲಿವರಿ ಚಾರ್ಜ್, ಜಿಎಸ್ಟಿ, ಪ್ಯಾಕಿಂಗ್ ಚಾರ್ಜ್ ಹಾಗೂ ಪ್ಲಾಟ್ಫಾರ್ಮ್ ಫೀ ಸೇರಿಸಿ ಡಬಲ್ ಬೆಲೆ ವಸೂಲಿ ಮಾಡಲಾಗುತ್ತಿದೆ.
- ಒಬ್ಬ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಟ್ವೀಟ್ ಮಾಡಿ, “ಒಂದು ದೋಸೆಗೆ 404 ರೂಪಾಯಿ ಬೆಲೆ ಇರುವುದೇ ದುಬಾರಿ, ಅದರ ಮೇಲೆ ಕೇವಲ ಆರ್ಡರ್ ಪ್ಲೇಸ್ ಮಾಡಿದ್ದಕ್ಕೆ 17.58 ರೂಪಾಯಿ ಶುಲ್ಕ! ಇದೇನಾ ಆನ್ಲೈನ್ ಡೆಲಿವರಿ ಲೂಟಿ?” ಎಂದು ವ್ಯಂಗ್ಯವಾಡಿದ್ದಾರೆ.
ಗ್ರಾಹಕರ ಆಕ್ರೋಶ
- ಆಹಾರದ ಬೆಲೆಯಲ್ಲೇ ವ್ಯತ್ಯಾಸ: ಮನೆಗೆ ತಲುಪಿಸುವ ಸೇವೆಗೆ ಡೆಲಿವರಿ ಚಾರ್ಜ್ ಪಡೆದರೆ ತಪ್ಪಿಲ್ಲ. ಆದರೆ ರೆಸ್ಟೋರೆಂಟ್ನಲ್ಲಿರುವ ಮೂಲ ಬೆಲೆಗಿಂತ ಆ್ಯಪ್ನಲ್ಲಿ ಬೆಲೆ ಏಕೆ ಹೆಚ್ಚು?
- ಪ್ಯಾಕೇಜಿಂಗ್ ಶುಲ್ಕ: ಹೋಟೆಲ್ಗಳು ಪ್ಯಾಕಿಂಗ್ಗೆ ಪ್ರತ್ಯೇಕವಾಗಿ 30 ರಿಂದ 50 ರೂಪಾಯಿ ಚಾರ್ಜ್ ಮಾಡುತ್ತವೆ.
- ಪ್ಲಾಟ್ಫಾರ್ಮ್ ಶುಲ್ಕ: ಆರ್ಡರ್ ಮಾಡಿದ ತಕ್ಷಣ ಆ್ಯಪ್ ನಿರ್ವಹಣೆ ಹೆಸರಿನಲ್ಲಿ 6 ರಿಂದ 10 ರೂಪಾಯಿ ಕಡ್ಡಾಯ ಪ್ಲಾಟ್ಫಾರ್ಮ್ ಫೀ ಕಟ್ ಆಗುತ್ತದೆ.
- ಈಗ ಕ್ಯಾಶ್ ಚಾರ್ಜ್: ಈಗ ಕ್ಯಾಶ್ ಕೊಟ್ಟರೆ ಅದಕ್ಕೂ 20-30 ರೂಪಾಯಿ ದಂಡ ಹಾಕಿದರೆ ಸಾಮಾನ್ಯ ಮಧ್ಯಮ ವರ್ಗದವರು ಆನ್ಲೈನ್ನಲ್ಲಿ ಆಹಾರ ತರಿಸಿಕೊಳ್ಳುವುದು ಹೇಗೆ ಎಂಬುದು ಜನರ ಪ್ರಶ್ನೆ.
ಒಟ್ಟಾರೆಯಾಗಿ, ಆರಂಭದಲ್ಲಿ ಭರ್ಜರಿ ಆಫರ್ ಮತ್ತು ಉಚಿತ ಡೆಲಿವರಿ ನೀಡಿ ಜನರನ್ನು ಆಕರ್ಷಿಸಿದ್ದ ಕಂಪನಿಗಳು, ಈಗ ಪ್ರತಿಯೊಂದು ಹಂತದಲ್ಲೂ ಒಂದೊಂದೇ ಹೊಸ ಶುಲ್ಕಗಳನ್ನು ಸೇರಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ











