ಆನ್‌ಲೈನ್ ಬೆಟ್ಟಿಂಗ್:  ಅಕ್ರಮ ಸೈಟ್‌ಗಳಿಗೆ ಕಡಿವಾಣ ಯಾವಾಗ?

ಭಾರತದಲ್ಲಿ ಹಣ ಹೂಡಿಕೆ ಮಾಡಿ ಆಡುವ ಯಾವುದೇ ಆನ್‌ಲೈನ್ ಗೇಮ್ ಅಥವಾ ಬೆಟ್ಟಿಂಗ್ ಸಂಪೂರ್ಣವಾಗಿ ಕಾನೂನುಬಾಹಿರ. ಕೇಂದ್ರ ಸರ್ಕಾರವು ಇತ್ತೀಚೆಗೆ ‘ದಿ ಪ್ರಮೋಷನ್ ಅಂಡ್ ರೆಗ್ಯುಲೇಷನ್ ಆಫ್ ಆನ್‌ಲೈನ್ ಗೇಮಿಂಗ್ ಆಕ್ಟ್’ ಜಾರಿಗೆ ತಂದು, ‘ಕೌಶಲ್ಯದ ಆಟ’ (Game of Skill) ಅಥವಾ ‘ಅದೃಷ್ಟದ ಆಟ’ (Game of Chance) ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಹಣವನ್ನು ಪಣಕ್ಕಿಟ್ಟು ಆಡುವ Dream11, My11Circle ನಂತಹ ರಿಯಲ್-ಮನಿ ಫ್ಯಾಂಟಸಿ ಆ್ಯಪ್‌ಗಳು ಹಾಗೂ ರಮ್ಮಿ/ಪೋಕರ್ ಗೇಮ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಆದರೆ, ಈ ದೇಶೀಯ ರಿಯಲ್-ಮನಿ ಆ್ಯಪ್‌ಗಳ ಮೇಲೆ ನಿಯಂತ್ರಣ ಬಂದರೂ, ವಾಸ್ತವ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ. ಗೂಗಲ್‌ನಲ್ಲಿ ಬರಿ “Betting Sites” ಎಂದು ಸರ್ಚ್ ಮಾಡಿದರೆ ಸಾಕು, 1xBet, Khelostar ನಂತಹ ನೂರಾರು ವಿದೇಶಿ ಅಕ್ರಮ ಬೆಟ್ಟಿಂಗ್ ಹಾಗೂ ಕ್ಯಾಸಿನೊ ಸೈಟ್‌ಗಳು ತಕ್ಷಣ ತೆರೆದುಕೊಳ್ಳುತ್ತವೆ. ನಿಯಮಗಳಿರುವುದು ಬರಿ ಕಾಗದದ ಮೇಲೆಯೇ ಎಂಬಂತೆ ಇವು ರಾಜರೋಷವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ದೇಶದ ಯುವಜನತೆಯನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕೊಳ್ಳೆ ಹೊಡೆಯುತ್ತಿವೆ.

ನಿಯಮಾವಳಿಗಳ ಕಣ್ಣೊರೆಸಿ ನಡೆಯುತ್ತಿರುವ ಅಕ್ರಮ ಜಾಲ

ದೇಶೀಯ ಕಂಪನಿಗಳು ಕಾನೂನಿಗೆ ಬದ್ಧವಾಗಿ ಹಣ  ತೆತ್ತು (ರಿಯಲ್-ಮನಿ )ಆಟಗಳನ್ನು ಬಂದ್ ಮಾಡಿವೆ ಅಥವಾ ಉಚಿತ ಮಾದರಿಗೆ (Free-to-play) ಬದಲಾಗಿವೆ. ಆದರೆ ವಿದೇಶಿ ಸರ್ವರ್‌ಗಳಿಂದ ನಡೆಯುವ ಅಕ್ರಮ ಬೆಟ್ಟಿಂಗ್ ಸೈಟ್‌ಗಳು ಯಾವುದೇ ಪರವಾನಗಿ ಇಲ್ಲದೆ, ಹವಾಲಾ ಮತ್ತು ಅಕ್ರಮ ಪಾವತಿ ಗೇಟ್‌ವೇಗಳ ಮೂಲಕ ಭಾರತದಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುತ್ತಿವೆ.

ಯುವಜನತೆಯ ಮೇಲಾಗುತ್ತಿರುವ ಗಂಭೀರ ಪರಿಣಾಮ

  • ಸುಲಭ ಹಣದ ಆಸೆ: ಸಣ್ಣ ಮೊತ್ತ ಹೂಡಿಕೆ ಮಾಡಿ ದೊಡ್ಡ ಹಣ ಗೆಲ್ಲಬಹುದು ಎಂಬ ಹುಸಿ ಭರವಸೆಗೆ ಬಿದ್ದು ಯುವಕರು ಈ ಸೈಟ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.
  • ಆರ್ಥಿಕ ಸಾಲದ ಸುಳಿ: ಆರಂಭದಲ್ಲಿ ಸ್ವಲ್ಪ ಗೆದ್ದಂತೆ ತೋರಿಸಿ, ನಂತರ ದೊಡ್ಡ ಮೊತ್ತ ಕಳೆದುಕೊಳ್ಳುವಂತೆ ಮಾಡಿ, ಸಾಲದ ಆ್ಯಪ್‌ಗಳ ಮೂಲಕ ಯುವಕರನ್ನು ಸಾಲಗಾರರನ್ನಾಗಿ ಮಾಡಲಾಗುತ್ತಿದೆ.
  • ಮಾನಸಿಕ ಖಿನ್ನತೆ ಹಾಗೂ ಸಾವು: ಹಣ ಕಳೆದುಕೊಂಡ ಯುವಕರು ಕುಟುಂಬದವರಿಗೆ ವಿಷಯ ತಿಳಿಸಲಾಗದೆ, ಸಾಲ ತೀರಿಸಲು ದಾರಿಯಿಲ್ಲದೆ ಆತ್ಮಹತ್ಯೆಯಂತಹ ಭೀಕರ ನಿರ್ಧಾರ ಕೈಗೊಳ್ಳುತ್ತಿದ್ದಾರೆ.

    ಈ ಅಕ್ರಮ ಸೈಟ್‌ಗಳನ್ನು ತಡೆಯುವ ಜವಾಬ್ದಾರಿ ಯಾರದ್ದು?

    • ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY): ದೇಶದಲ್ಲಿ ಲಭ್ಯವಿರುವ ಅಕ್ರಮ ಬೆಟ್ಟಿಂಗ್ ಸೈಟ್‌ಗಳ ಯುಆರ್‌ಎಲ್ (URL) ಹಾಗೂ ಐಪಿ ಅಡ್ರೆಸ್‌ಗಳನ್ನು ತಕ್ಷಣವೇ ಶಾಶ್ವತವಾಗಿ ಬ್ಲಾಕ್ ಮಾಡುವುದು.
    • ಗೂಗಲ್ ಹಾಗೂ ಸರ್ಚ್ ಇಂಜಿನ್‌ಗಳು: ಗೂಗಲ್ ಸರ್ಚ್ ಫಲಿತಾಂಶಗಳಲ್ಲಿ ಇಂತಹ ಅಕ್ರಮ ಬೆಟ್ಟಿಂಗ್ ತಾಣಗಳು ಕಾಣಿಸಿಕೊಳ್ಳದಂತೆ ಮತ್ತು ಅವುಗಳ ಪ್ರಚಾರ (SEO) ಆಗದಂತೆ ನಿರ್ಬಂಧಿಸುವುದು.
    • ಸೈಬರ್ ಪೊಲೀಸ್ ಮತ್ತು ಇಡಿ (ED): ವಿದೇಶಿ ಖಾತೆಗಳಿಗೆ ಅಕ್ರಮವಾಗಿ ಹರಿದುಹೋಗುತ್ತಿರುವ ಹಣದ ಹವಾಲಾ ಜಾಲವನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆ ವಿಧಿಸುವುದು.
    • ಬ್ಯಾಂಕುಗಳು ಮತ್ತು UPI ಸೇವೆಗಳು: ಅಕ್ರಮ ಜೂಜಿನ ವೆಬ್‌ಸೈಟ್‌ಗಳಿಗೆ ಸಂಪರ್ಕ ಹೊಂದಿರುವ ಪಾವತಿ ವ್ಯವಸ್ಥೆಗಳನ್ನು (Payment Gateways) ಗುರುತಿಸಿ ಆರ್ಥಿಕ ವಹಿವಾಟುಗಳನ್ನು ನಿಲ್ಲಿಸುವುದು

    ಕಟ್ಟುನಿಟ್ಟಿನ ಜಾರಿ ಎಂದು?

    ಸರ್ಕಾರವು ದೇಶೀಯ ಆ್ಯಪ್‌ಗಳ ಮೇಲೆ ನಿಯಂತ್ರಣ ಹೇರಿರುವುದು ಒಳ್ಳೆಯ ಹೆಜ್ಜೆಯಾದರೂ, ಗೂಗಲ್‌ನಲ್ಲಿ ಉಚಿತವಾಗಿ ಸಿಗುವ ಈ ಅಕ್ರಮ ಬೆಟ್ಟಿಂಗ್ ಸೈಟ್‌ಗಳ ಮೇಲೆ ‘ಡಿಜಿಟಲ್ ಸ್ಟ್ರೈಕ್’ ಮಾಡಬೇಕಿದೆ. ಕಠಿಣ ತಾಂತ್ರಿಕ ತಡೆಗೋಡೆ ನಿರ್ಮಿಸಿ ಈ ಕಪ್ಪು ಜಾಲವನ್ನು ಭಾರತೀಯ ನೆಟ್‌ವರ್ಕ್‌ಗಳಿಂದ ಸಂಪೂರ್ಣವಾಗಿ ತೆಗೆದುಹಾಕದಿದ್ದರೆ, ದೇಶದ ಯುವಜನತೆಯನ್ನು ಈ ಆನ್‌ಲೈನ್ ಜೂಜಿನ ದಾಸ್ಯದಿಂದ ರಕ್ಷಿಸಲು ಸಾಧ್ಯವಿಲ್ಲ.

    Leave a Comment

    Your email address will not be published. Required fields are marked *