ದಕ್ಷಿಣ ಭಾರತ ಚಿತ್ರರಂಗದ ಅತಿ ದೊಡ್ಡ ಅತೀ ದೊಡ್ಡ ಪ್ರಶಸ್ತಿ ಸಮಾರಂಭಗಳಲ್ಲಿ ಒಂದಾದಎಂದೇ ‘ಸೈಮಾ’ ಪ್ರಶಸ್ತಿ (South Indian International Movie Awards – SIIMA 2026) ಈ ಬಾರಿ ಕರುನಾಡಿನ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 14ನೇ ಆವೃತ್ತಿಯ ಈ ಸಿನಿರಂಗದ ಹಬ್ಬವು ಗಾರ್ಡನ್ ಸಿಟಿ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ (Koramangala Indoor Stadium) ಸೆಪ್ಟೆಂಬರ್ 12 ಮತ್ತು 13 ರಂದು ಎರಡು ದಿನಗಳ ಕಾಲ ನಕ್ಷತ್ರಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಪ್ರತಿದಿನ ಸಂಜೆ 7:00 ಗಂಟೆಗೆ ಕಾರ್ಯಕ್ರಮ ಆರಂಭವಾಗಿದ್ದು, ಮೊದಲ ದಿನವಾದ ಸೆಪ್ಟೆಂಬರ್ 12 ರಂದು ಕನ್ನಡ ಮತ್ತು ತೆಲುಗು ಚಿತ್ರರಂಗದ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎರಡನೇ ದಿನವಾದ ಸೆಪ್ಟೆಂಬರ್ 13 ರಂದು ತಮಿಳು ಹಾಗೂ ಮಲಯಾಳಂ ಸಿನಿತಾರೆಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಕನ್ನಡ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ದಿಗ್ಗಜರು ಹಾಗೂ ಯುವ ಪ್ರತಿಭೆಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ. ಸ್ಯಾಂಡಲ್‌ವುಡ್‌ನ ಚಿರಯುವಕ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‌ಕುಮಾರ್ ಅವರಿಗೆ ಅವರ ಅಪ್ರತಿಮ ಮನರಂಜನೆಗಾಗಿ ‘Entertainer of the Year’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿದ ‘ಕಾಂತಾರ ಚಾಪ್ಟರ್ 1’ ಚಿತ್ರದ ಅದ್ಭುತ ಅಭಿನಯಕ್ಕಾಗಿ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ಅತ್ಯುತ್ತಮ ನಟ (ಲೀಡಿಂಗ್ ರೋಲ್) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರೆ, ಇದೇ ಚಿತ್ರದ ನೈಜ ನಟನೆಗಾಗಿ ರುಕ್ಮಿಣಿ ವಸಂತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದರು.
ವಿಮರ್ಶಕರ ವಿಭಾಗದಲ್ಲಿ (Critics Choice) ‘ಮಹಾದೇವ’ ಚಿತ್ರದಲ್ಲಿನ ಮನೋಜ್ಞ ಅಭಿನಯಕ್ಕಾಗಿ ವಿನೋದ್ ಪ್ರಭಾಕರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ‘ಗತವೈಭವ’ ಚಿತ್ರದ ವಿಶಿಷ್ಟ ಪಾತ್ರ ನಿರ್ವಹಣೆಗಾಗಿ ನಟಿ ಆಶಿಕಾ ರಂಗನಾಥ್ ವಿಮರ್ಶಕರ ಮೆಚ್ಚುಗೆಯ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡರು. ತಾಂತ್ರಿಕ ಹಾಗೂ ಸಂಗೀತ ವಿಭಾಗದಲ್ಲೂ ಕನ್ನಡ ಕಲಾವಿದರು ಮಿಂಚಿದ್ದು, ‘ಕಾಂತಾರ ಚಾಪ್ಟರ್ 1’ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗಾಗಿ ಬಿ. ಅಜನೀಶ್ ಲೋಕನಾಥ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.
ಗಾಯನ ವಿಭಾಗದಲ್ಲಿ ‘ಡ್ಯಾಂಕ್ಸ್ ಆಂಥೆಮ್’ ಹಾಡಿಗಾಗಿ ಅನುರಾಗ್ ಕುಲಕರ್ಣಿ ಅತ್ಯುತ್ತಮ ಹಿನ್ನೆಲೆ ಗಾಯಕ (ಪುರುಷ) ಪ್ರಶಸ್ತಿ ಪಡೆದರೆ, ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಅವರು ‘ಮಸ್ತ್ ಮಲೈಕಾ’ ಹಾಡಿನ ಗಾಯನಕ್ಕಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದು ವೇದಿಕೆಯಲ್ಲಿ ಗಮನ ಸೆಳೆದರು. ‘ಮದನ ಮನ ಮೋಹಿನಿ’ ಹಾಡಿನ ಸುಂದರ ಸಾಹಿತ್ಯ ರಚನೆಗಾಗಿ ಪ್ರಮೋದ್ ಮರವಂತೆ ಅವರಿಗೆ ಅತ್ಯುತ್ತಮ ಗೀತರಚನೆಕಾರ ಗೌರವ ಲಭಿಸಿತು.
ಹೊಸ ಪ್ರತಿಭೆಗಳ ಪೈಕಿ ‘ಸಫ್ರಮ್ ಸೋ’ ಚಿತ್ರದ ಮೂಲಕ ಜೆ.ಪಿ. ತುಮಿನಾಡ್ ಅವರು ಅತ್ಯುತ್ತಮ ಪೋಷಕ ನಟ ಹಾಗೂ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಎಂಬ ಎರಡು ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅತ್ಯುತ್ತಮ ಚೊಚ್ಚಲ ನಟ ಪ್ರಶಸ್ತಿಯನ್ನು ‘ಗತವೈಭವ’ ಚಿತ್ರಕ್ಕಾಗಿ ದುಷ್ಯಂತ್ ಪಡೆದರೆ, ವಿಮರ್ಶಕರ ವಿಭಾಗದಲ್ಲಿ ‘ಜೂನಿಯರ್’ ಚಿತ್ರದ ನಟನೆಗಾಗಿ ಕಿರೀಟಿ ಪ್ರಶಸ್ತಿ ಪಡೆದರು. ‘ಏಳುಮಲೆ’ ಚಿತ್ರದ ಅಭಿನಯಕ್ಕಾಗಿ ಪ್ರಿಯಾಂಕಾ ಆಚಾರ್ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಗೆದ್ದರೆ, ಯುವ ನಿರ್ಮಾಪಕಿ ನಿವೇದಿತಾ ಶಿವರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ಚೊಚ್ಚಲ ನಿರ್ಮಾಪಕಿ ಪ್ರಶಸ್ತಿ ಲಭಿಸಿತು. ಈ ಮೂಲಕ ಬೆಂಗಳೂರಿನಲ್ಲಿ ನಡೆದ 14ನೇ ಸೀಮಾ ಅವಾರ್ಡ್ಸ್‌ನಲ್ಲಿ ಕನ್ನಡ ಚಿತ್ರರಂಗದ ಹಿರಿ-ಕಿರಿ ಪ್ರತಿಭೆಗಳು ಹೆಮ್ಮೆಯ ಸಾಧನೆ ತೋರಿದ್ದಾರೆ.












