ಕರಾವಳಿಯ ವಿಶಿಷ್ಟ ಖಾದ್ಯ ‘ಕಲತ್ತಪ್ಪಂ’: ಬೆಲ್ಲ ಮತ್ತು ಕರಿದ ಈರುಳ್ಳಿಯ ಈ ಅಪರೂಪದ ಸಿಹಿಯನ್ನು ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ ನೋಡಿ.

ನಮ್ಮ ಕರಾವಳಿ ಮತ್ತು ಮಲೆನಾಡಿನ ಹಳ್ಳಿ ಮನೆಗಳಲ್ಲಿ ಅಜ್ಜಿಯಂದಿರು ಮಾಡುತ್ತಿದ್ದ ಎಷ್ಟೋ ಅದ್ಭುತ ತಿನಿಸುಗಳು ಇಂದಿನ ಯುವಪೀಳಿಗೆಗೆ ತಿಳಿದೇ ಇಲ್ಲ. ಅಂಥ ಅಪರೂಪದ ಸಾಂಪ್ರದಾಯಿಕ ಖಾದ್ಯಗಳಲ್ಲಿ ‘ಕಲತ್ತಪ್ಪಂ’ (Kalathappam) ಮುಂಚೂಣಿಯಲ್ಲಿದೆ. ಸಾಮಾನ್ಯವಾಗಿ ಸಿಹಿ ತಿಂಡಿಗಳಲ್ಲಿ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಹಾಕುವುದು ನಮಗೆಲ್ಲಾ ಗೊತ್ತು. ಆದರೆ ಸಿಹಿ ಅಪ್ಪಕ್ಕೆ ತುಪ್ಪದಲ್ಲಿ ಕರಿದ ಈರುಳ್ಳಿಯ ಒಗ್ಗರಣೆ ಕೊಡುವುದನ್ನು ಎಂದಾದರೂ ಕೇಳಿದ್ದೀರಾ? ನಾನು ಮೊದಲ ಬಾರಿಗೆ ಕರಾವಳಿಯ ಹಳ್ಳಿಯೊಂದರ ಮನೆಯಲ್ಲಿ ಇದನ್ನು ತಿಂದಾಗ ಸಿಹಿ ಮತ್ತು ಈರುಳ್ಳಿಯ ಕಾಂಬಿನೇಷನ್ ನೋಡಿ ನಿಜಕ್ಕೂ ಅಚ್ಚರಿಪಟ್ಟುಕೊಂಡಿದ್ದೆ. ಆದರೆ ಬಾಯಿಗಿಟ್ಟ ತಕ್ಷಣ ಅದರ ಮೃದುತ್ವ ಮತ್ತು ಆ ಕ್ಯಾರಮೆಲ್ ಪರಿಮಳ ನೀಡಿದ ರುಚಿ ಇಂದಿಗೂ ನೆನಪಿನಲ್ಲಿದೆ.

ಬೇಕಾಗುವ ಮುಖ್ಯ ಸಾಮಗ್ರಿಗಳು:

  • ​ದೋಸೆ ಅಕ್ಕಿ – 1 ಕಪ್ (3 ರಿಂದ 4 ಗಂಟೆ ನೀರಿನಲ್ಲಿ ನೆನೆಸಿಟ್ಟದ್ದು)
  • ಬೆಲ್ಲದ ಪುಡಿ – ಮುಕ್ಕಾಲು ಕಪ್
  • ​ಕಾಯಿತುರಿ – ಅರ್ಧ ಕಪ್
  • ​ಅನ್ನ (ಬೇಯಿಸಿದ ಅನ್ನ) – 2 ದೊಡ್ಡ ಚಮಚ (ಇದು ಹಿಟ್ಟಿಗೆ ಒಳ್ಳೆಯ ಸಾಫ್ಟ್‌ನೆಸ್ ನೀಡುತ್ತದೆ)
  • ​ಸಣ್ಣಗೆ ಹೆಚ್ಚಿದ ಈರುಳ್ಳಿ – 1
  • ​ಹಲ್ಲುಕಾಯಿ (ಸಣ್ಣಗೆ ಹೆಚ್ಚಿದ ತೆಂಗಿನ ಚೂರುಗಳು) – 2 ದೊಡ್ಡ ಚಮಚ
  • ​ಏಲಕ್ಕಿ ಪುಡಿ – ಅರ್ಧ ಚಮಚ
  • ​ಶುದ್ಧ ದೇಸಿ ತುಪ್ಪ – 3 ದೊಡ್ಡ ಚಮಚ
  • ​ಅಡುಗೆ ಸೋಡಾ – ಕಾಲು ಚಮಚ
  • ಉಪ್ಪು – ಒಂದು ಸಣ್ಣ ಚಿಟಿಕೆ

 

ಕಲತ್ತಪ್ಪಂ

ಮಾಡುವ ಹಂತ ಹಂತದ ವಿಧಾನ:

  1. ಹಿಟ್ಟು ರುಬ್ಬುವುದು: ನೆನೆಸಿದ ಅಕ್ಕಿ, ಕಾಯಿತುರಿ, ಬೇಯಿಸಿದ ಅನ್ನಕ್ಕೆ ಅಲ್ಪ ಪ್ರಮಾಣದ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ (ದೋಸೆ ಹಿಟ್ಟಿನಂತೆ) ರುಬ್ಬಿಕೊಳ್ಳಿ.
  2. ಬೆಲ್ಲದ ನೀರು: ಪಾತ್ರೆಗೆ ಬೆಲ್ಲ ಹಾಗೂ ಕಾಲು ಕಪ್ ನೀರು ಹಾಕಿ ಬಿಸಿ ಮಾಡಿ. ಬೆಲ್ಲ ಸಂಪೂರ್ಣ ಕರಗಿದ ನಂತರ ಕಸ-ಕಡ್ಡಿ ಇರದಂತೆ ಸೋಸಿ ತಣ್ಣಗಾಗಲು ಬಿಡಿ.
  3. ಹಿಟ್ಟಿನ ಹದ: ರುಬ್ಬಿದ ಹಿಟ್ಟಿಗೆ ಬೆಲ್ಲದ ನೀರು, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಹಾಗೂ ಅಡುಗೆ ಸೋಡಾ ಬೆರೆಸಿ ಚೆನ್ನಾಗಿ ಕದಡಿ. ಹಿಟ್ಟು ತೀರಾ ತೆಳುವಾಗದಂತೆ ನೋಡಿಕೊಳ್ಳಿ.
  4. ಘಮಘಮಿಸುವ ಒಗ್ಗರಣೆ: ಸಣ್ಣ ಪ್ರೆಶರ್ ಕುಕ್ಕರ್ ಅಥವಾ ದಪ್ಪ ತಳದ ನಾನ್‌ಸ್ಟಿಕ್ ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ತೆಂಗಿನ ಚೂರು ಮತ್ತು ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಚೆನ್ನಾಗಿ ಹುರಿಯಿರಿ.
  5. ಬೇಯಿಸುವ ವಿಧಾನ: ಒಗ್ಗರಣೆಯ ಅರ್ಧ ಭಾಗವನ್ನು ತೆಗೆದು ಹಿಟ್ಟಿಗೆ ಬೆರೆಸಿ. ಉಳಿದ ಒಗ್ಗರಣೆ ಕುಕ್ಕರ್‌ನಲ್ಲೇ ಹರಡಿರಲಿ. ಈಗ ಗ್ಯಾಸ್ ಉರಿಯನ್ನು ತೀರಾ ಕಡಿಮೆ ಮಾಡಿ, ತಯಾರಿಸಿದ ಹಿಟ್ಟನ್ನು ನಿಧಾನವಾಗಿ ಆ ಬಿಸಿ ತುಪ್ಪದ ಮೇಲೆ ಸುರಿಯಿರಿ.
  6. ಕುಕ್ಕರ್ ಮುಚ್ಚಳದ ವಿಜಲ್(Whistle/Weight) ತೆಗೆದು ಮುಚ್ಚಳ ಹಾಕಿ. ಅತ್ಯಂತ ಸಣ್ಣ ಉರಿಯಲ್ಲಿ 20 ರಿಂದ 25 ನಿಮಿಷ ಬೇಯಲು ಬಿಡಿ. ಚಾಕುವಿನಿಂದ ಚುಚ್ಚಿ ನೋಡಿದಾಗ ಹಿಟ್ಟು ಅಂಟದಿದ್ದರೆ ಸ್ಟವ್ ಆಫ್ ಮಾಡಿ.

ನನ್ನ ಅನುಭವದ ಕೆಲವು ಟಿಪ್ಸ್:

  • ​ಬೆಲ್ಲದ ನೀರು ಪೂರ್ತಿ ತಣ್ಣಗಾದ ಮೇಲೆಯೇ ಹಿಟ್ಟಿಗೆ ಬೆರೆಸಬೇಕು, ಇಲ್ಲವಾದರೆ ಹಿಟ್ಟು ಹಾಳಾಗುವ ಸಾಧ್ಯತೆ ಇರುತ್ತದೆ.
  • ​ಗ್ಯಾಸ್ ಉರಿ ಸ್ವಲ್ಪ ಹೆಚ್ಚಾದರೂ ತಳ ಸೀದುಹೋಗುತ್ತದೆ, ಆದ್ದರಿಂದ ಪೂರ್ತಿ ಪ್ರಕ್ರಿಯೆಯನ್ನು ಮಂದ ಉರಿಯಲ್ಲೇ ಮಾಡಿ.
  • ​ಕುಕ್ಕರ್ ಸಂಪೂರ್ಣ ತಣ್ಣಗಾದ ಮೇಲಷ್ಟೇ ಕಲತ್ತಪ್ಪಂ ಅನ್ನು ಹೊರತೆಗೆದು ಕತ್ತರಿಸಿ ಬಡಿಸಿ.

Leave a Comment

Your email address will not be published. Required fields are marked *