ಬಿಸಿ ಅನ್ನಕ್ಕೆ ತುಪ್ಪ ಹಾಕಿ ಸವಿಯಲು ರುಚಿಕರ ಹಳ್ಳಿ ಸ್ಟೈಲ್ ಬಸ್ಸಾರು: ಈ ಒಂದು ಮಸಾಲೆ ಬಳಸಿ ಮಾಡಿ ನೋಡಿ!

ನಮ್ಮ‌‌ ಹಳ್ಳಿಗಳ ಕಡೆ  ಮುದ್ದೆ ಅಥವಾ ಬಿಸಿ ಅನ್ನದ ಜೊತೆಗೆ ಬಸ್ಸಾರು ಮಾಡಿ ಬಡಿಸಿದರೆ ಅದನ್ನು ಸವಿಯುವ ರುಚಿಯೇ ಬೇರೆ. ಸೊಪ್ಪು ಮತ್ತು ಕಾಳುಗಳನ್ನು ಬೇಯಿಸಿ, ಆ ನೀರನ್ನು ಬಸಿದು ಮಾಡುವ ಈ ಸಾರು ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾ ಹಿತಕರ. ಪಕ್ಕಾ ಹಳ್ಳಿ ಶೈಲಿಯ ಹುರುಳಿಕಾಳು ಮತ್ತು ಸಬ್ಬಕ್ಕಿ/ದಂಟು ಸೊಪ್ಪಿನ ಬಸ್ಸಾರು ಮಾಡುವ ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು:

  • ಕಾಳು ಮತ್ತು ಸೊಪ್ಪು:
    • ​ಹುರುಳಿಕಾಳು – 1 ಕಪ್ (ನೆನೆಸಿಟ್ಟಿದ್ದು)
    • ​ಯಾವುದಾದರೂ ಸೊಪ್ಪು (ದಂಟು ಸೊಪ್ಪು ಅಥವಾ ಸಬ್ಬಕ್ಕಿ ಸೊಪ್ಪು) – 1 ಕಟ್ಟು
    • ​ಉಪ್ಪು – ರುಚಿಗೆ ತಕ್ಕಷ್ಟು
    • ​ಅರಿಶಿನ – ಅರ್ಧ ಚಮಚ
  • ಮಸಾಲೆ ರುಬ್ಬಿಕೊಳ್ಳಲು:
    • ​ಬೇಯಿಸಿದ ಕಾಳು ಮತ್ತು ಸೊಪ್ಪು – 2 ಚಮಚ
    • ​ತೆಂಗಿನಕಾಯಿ ತುರಿ – ಅರ್ಧ ಕಪ್
    • ​ಈರುಳ್ಳಿ – 1 (ಚಿಕ್ಕದು)
    • ​ಬೆಳ್ಳುಳ್ಳಿ – 6 ರಿಂದ 8 ಎಸಳು
    • ​ಜೀರಿಗೆ – 1 ಚಮಚ
    • ​ಕಾಳುಮೆಣಸು (ಪೆಪ್ಪರ್) – ಅರ್ಧ ಚಮಚ
    • ​ಧನಿಯಾ ಪುಡಿ – 1.5 ಚಮಚ
    • ಖಾರದ ಪುಡಿ ಅಥವಾ ಸಾಂಬಾರ್ ಪುಡಿ – 2 ಚಮ
    • ​ಹುಣಸೆಹಣ್ಣು – ಸಣ್ಣ ನಿಂಬೆಹಣ್ಣಿನ ಗಾತ್ರದ್ದು
    • ​ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಒಗ್ಗರಣೆಗೆ:
    • ​ಎಣ್ಣೆ – 2 ಚಮಚ
    • ​ಸಾಸಿವೆ – ಅರ್ಧ ಚಮಚ
    • ​ಒಣಮೆಣಸಿನಕಾಯಿ – 2
    • ​ಬೆಳ್ಳುಳ್ಳಿ – 4 ಎಸಳು (ಜಜ್ಜಿದ್ದು)
    • ​ಕರಿಬೇವಿನ ಎಲೆ – ಸ್ವಲ್ಪ

ಮಾಡುವ ಸರಳ ವಿಧಾನ:

1. ಕಾಳು ಮತ್ತು ಸೊಪ್ಪು ಬೇಯಿಸುವುದು:

  • ​ಕುಕ್ಕರ್‌ನಲ್ಲಿ ನೆನೆಸಿದ ಹುರುಳಿಕಾಳು, ಕತ್ತರಿಸಿದ ಸೊಪ್ಪು, ಅರ್ಧ ಚಮಚ ಅರಿಶಿನ, ಸ್ವಲ್ಪ ಉಪ್ಪು ಮತ್ತು ಸಾಕಷ್ಟು ನೀರು ಹಾಕಿ 3 ರಿಂದ 4 ವಿಷಲ್ ಕೂಗಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
  • ​ಬೆಂದ ನಂತರ ಕಾಳು-ಸೊಪ್ಪನ್ನು ಜರಡಿಗೆ ಹಾಕಿ, ನೀರನ್ನು ಸಂಪೂರ್ಣವಾಗಿ ಬಸಿದು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ (ಇದೇ ಬಸ್ಸು ನೀರು ಸಾರಿಗೆ ಆಧಾರ).

2. ಮಸಾಲೆ ಸಿದ್ಧತೆ:

  • ​ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಈರುಳ್ಳಿ, ಬೆಳ್ಳುಳ್ಳಿ, ಜೀರಿಗೆ, ಮೆಣಸು, ಧನಿಯಾ ಪುಡಿ, ಸಾಂಬಾರ್ ಪುಡಿ, ಹುಣಸೆಹಣ್ಣು, ಕೊತ್ತಂಬರಿ ಸೊಪ್ಪು ಹಾಗೂ ಬೇಯಿಸಿಟ್ಟ 2 ಚಮಚ ಕಾಳು-ಸೊಪ್ಪನ್ನು ಹಾಕಿ.
  • ​ಸ್ವಲ್ಪ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

3. ಸಾರು ಕುದಿಸುವುದು:

  • ​ಒಂದು ಪಾತ್ರೆಗೆ ನಾವು ಬಸಿದಿಟ್ಟ ಕಾಳಿನ ನೀರನ್ನು ಹಾಕಿ, ಅದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ ಚೆನ್ನಾಗಿ ಕಲಸಿ.
  • ​ಸಾರಿನ ಹದಕ್ಕೆ ತಕ್ಕಂತೆ ಅಗತ್ಯವಿದ್ದರೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಮಧ್ಯಮ ಉರಿಯಲ್ಲಿ 8-10 ನಿಮಿಷ ಚೆನ್ನಾಗಿ ಕುದಿಸಿ.

4. ಒಗ್ಗರಣೆ ನೀಡುವುದು:

  • ​ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಜಜ್ಜಿದ ಬೆಳ್ಳುಳ್ಳಿ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚಟಪಟ ಎಂದಾಗ ಒಗ್ಗರಣೆಯನ್ನು ಸಾರಿಗೆ ಸೇರಿಸಿ ಮುಚ್ಚಳ ಮುಚ್ಚಿ.

ಸೊಪ್ಪುಕಾಳು:

ಬಸಿದು ಉಳಿದಿರುವ ಕಾಳು ಮತ್ತು ಸೊಪ್ಪಿಗೆ ಎಣ್ಣೆ, ಸಾಸಿವೆ, ಈರುಳ್ಳಿ, ಹಸಿಮೆಣಸಿನಕಾಯಿ ಹಾಗೂ ತೆಂಗಿನತುರಿ ಹಾಕಿ ಒಗ್ಗರಣೆ ಕೊಟ್ಟರೆ ರುಚಿಕರವಾದ ಬಸ್ಸಾರಿನ ಪಲ್ಯವೂ ರೆಡಿಯಾಗುತ್ತದೆ. ಬಿಸಿಬಿಸಿ ಅನ್ನಕ್ಕೆ ಒಂದು ಚಮಚ ನಾಟಿ ಹಸುವಿನ ತುಪ್ಪ ಮತ್ತು ಪಲ್ಯ ಸೇರಿಸಿ ಈ ಮಾಡುವ ಊಟ ಹಬ್ಬದೂಟಕ್ಕಿಂತ ಒಂದು‌ ಕೈ ಮೇಲಿಲ್ಲ ಅಂದರೆ ಹೇಳಿ.

ಸವಿಯಲು ರಚಿಕರ  – ಆರೋಗ್ಯಕ್ಕೆ ಹಿತಕರ

ಬಸ್ಸಾರು ಸವಿಯಲು ಎಷ್ಟು ರುಚಿಯಾಗಿರುತ್ತೋ ಅಷ್ಟೇ ಆರೋಗ್ಯಕ್ಕೂ ಉತ್ತಮವಾದ ಆಹಾರ. ಅದರಲ್ಲೂ ಹಳ್ಳಿಗಳ ಹೊಲದಲ್ಲಿ ಸಿಗುವ ನಾಟಿಬೆರಕೆ ಸೊಪ್ಪಿನ ಬಸ್ಸಾರು ಮತ್ತು ಬಿಸಿ ಮುದ್ದೆಯ ಕಾಂಬಿನೇಷನ್ ತಿಂದರೆ ಸಿಗುವ ತೃಪ್ತಿಗೆ ಬೇರೆ ಸಾಟಿಯೇ ಇಲ್ಲ.”

Leave a Comment

Your email address will not be published. Required fields are marked *