ದುಬೈನಲ್ಲಿ ನಡೆದ ಮಹಿಳಾ ಏಷ್ಯಾ ಕಪ (Asia cup)2026ರ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ 72 ರನ್ಗಳ ಭರ್ಜರಿ ಜಯ ದಾಖಲಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದ ಬೆನ್ನಲ್ಲೇ ಮೈದಾನದಲ್ಲಿ ಹೈಡ್ರಾಮಾ ನಡೆದಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಕೈಯಿಂದ ಟ್ರೋಫಿ ಮತ್ತು ಮೆಡಲ್ ಸ್ವೀಕರಿಸಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸಂಪೂರ್ಣವಾಗಿ ನಿರಾಕರಿಸಿದೆ.
ವೇದಿಕೆಯಲ್ಲಿ ನಖ್ವಿ ಕಂಡು ವಾಪಸ್ ಹೋದ ಸ್ಮೃತಿ ಮಂಧಾನ
ಪಂದ್ಯ ಮುಗಿದ ಬಳಿಕ ಬಹುಮಾನ ವಿತರಣಾ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿತ್ತು. ಈ ವೇಳೆ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ (Mohsin Naqvi)ಟ್ರೋಫಿ ವಿತರಿಸಲು ಪೋಡಿಯಂ ಮೇಲೆ ನಿಂತಿರುವುದನ್ನು ಉಪನಾಯಕಿ ಸ್ಮೃತಿ ಮಂಧಾನ ಗಮನಿಸಿದರು. ತಕ್ಷಣವೇ ಮೈದಾನಕ್ಕೆ ಬರುವುದನ್ನು ನಿಲ್ಲಿಸಿ ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ಹಿಂತಿರುಗಿದರು. ಭಾರತೀಯ ಆಟಗಾರ್ತಿಯರು ನಖ್ವಿ ಅವರಿಂದ ಯಾವುದೇ ಪ್ರಶಸ್ತಿ ಸ್ವೀಕರಿಸದಿರಲು ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದ್ದರಿಂದ ಸಮಾರಂಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಲೈವ್ ಪ್ರಸಾರ ಕಟ್, ಟ್ರೋಫಿ ಇಲ್ಲದೆ ಮೈದಾನ ತೊರೆದ ವನಿತೆಯರು
ಶ್ರೀಲಂಕಾ ನಾಯಕಿ ಚಾಮರಿ ಅಟಪಟ್ಟು ಅವರ ಮಾತುಕತೆಯ ಬೆನ್ನಲ್ಲೇ ಪ್ರಸಾರಕರು ನೇರ ಪ್ರಸಾರವನ್ನು ಅರ್ಧಕ್ಕೇ ನಿಲ್ಲಿಸಿದರು (ಲೈವ್ ಟೆಲಿಕಾಸ್ಟ್ ಕಟ್ ಆಯಿತು). ನಿರೂಪಕ ಫರ್ವೀಜ್ ಮಹರೂಫ್ ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯಗೊಂಡಿದೆ ಎಂದು ಏಕಾಏಕಿ ಘೋಷಿಸಿದರು. ಭಾರತ ತಂಡವು ಯಾವುದೇ ಟ್ರೋಫಿ ಅಥವಾ ಪದಕಗಳನ್ನು ಕೈಗೆತ್ತಿಕೊಳ್ಳದೆ ಚಾಂಪಿಯನ್ ಸಂಭ್ರಮವನ್ನು ಮೈದಾನದಲ್ಲೇ ಆಚರಿಸಿ ಹೊರನಡೆಯಿತು.
2025ರ ಪುರುಷರ ಏಷ್ಯಾ ಕಪ್ ಘಟನೆ ಮರುಕಳಿಕೆ
ಇದೇ ರೀತಿಯ ಘಟನೆ 2025ರ ಪುರುಷರ ಏಷ್ಯಾ ಕಪ್ ಫೈನಲ್ನಲ್ಲೂ ನಡೆದಿತ್ತು. ಅಂದು ಕೂಡ ಭಾರತ ಪುರುಷರ ತಂಡ ಮೊಹ್ಸಿನ್ ನಖ್ವಿ ಅವರಿಂದ ಪದಕ ಅಥವಾ ಟ್ರೋಫಿ ಪಡೆಯಲು ನಿರಾಕರಿಸಿ, ಟ್ರೋಫಿ ಇಲ್ಲದೆಯೇ ಕೈಯಲ್ಲಿ ಎತ್ತಿ ಹಿಡಿಯುವಂತೆ ನಟಿಸಿ ಫೋಟೋಗಳಿಗೆ ಪೋಸ್ ನೀಡಿತ್ತು. ಈಗ ಮಹಿಳಾ ತಂಡವೂ ಅದೇ ಹಾದಿ ತುಳಿದು ಪಾಕಿಸ್ತಾನದ ರಾಜಕೀಯ ನಾಯಕನಿಂದ ಟ್ರೋಫಿ ಸ್ವೀಕರಿಸಲು ನೇರವಾಗಿ ನಿರಾಕರಿಸಿದೆ.

ತಾವೇ ಪರಸ್ಪರ ಪದಕ ತೊಟ್ಟು ಟೀಮ್ ಇಂಡಿಯಾ ಸಂಭ್ರಮ!
ಪಾಕಿಸ್ತಾನಿ ಸಚಿವನ ಕೈಯಿಂದ ಪದಕಗಳನ್ನು ಪಡೆಯಲು ಸ್ಪಷ್ಟವಾಗಿ ನಿರಾಕರಿಸಿದ ಭಾರತ ತಂಡದ ಆಟಗಾರ್ತಿಯರು ಮತ್ತು ಸಿಬ್ಬಂದಿ, ಮೈದಾನದ ಪಕ್ಕದಲ್ಲೇ ತಾವೇ ಆಟಗಾರ್ತಿ ಯರಿಗೆ ಪದಕಗಳನ್ನು ಪದಕಗಳನ್ನು ನೀಡಿ ವಿಜಯೋತ್ಸವ ಆಚರಿಸಿದರು. ಟೀಮ್ ಇಂಡಿಯಾದ ಈ ದಿಟ್ಟ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.













