ದೆಹಲಿಯಲ್ಲಿ ಇತ್ತೀಚೆಗೆ ನಡೆದ 18ನೇ ಬ್ರಿಕ್ಸ್ (BRICS) ಶೃಂಗಸಭೆಯ ಭದ್ರತಾ ಕರ್ತವ್ಯದ ವೇಳೆ ಅತ್ಯಂತ ಗಂಭೀರ ಸ್ವರೂಪದ ಭದ್ರತಾ ಲೋಪವೊಂದು ಬೆಳಕಿಗೆ ಬಂದಿದೆ. ವಿದೇಶಿ ಗಣ್ಯರು ತಂಗಿದ್ದ ಪಂಚತಾರಾ ಹೋಟೆಲ್‌ನ ಮೇಲ್ಛಾವಣಿಯಲ್ಲಿ ಸ್ನೈಪರ್ ಆಗಿ ನಿಯೋಜನೆಗೊಂಡಿದ್ದ ದೆಹಲಿ ಪೊಲೀಸ್ ಸಿಬ್ಬಂದಿಯೊಬ್ಬರು, ಕರ್ತವ್ಯದ ಸ್ಥಳದಲ್ಲೇ ಅತ್ಯಾಧುನಿಕ ಬಂದೂಕುಗಳನ್ನು ಪ್ರದರ್ಶಿಸುತ್ತಾ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಏನಿದು ಘಟನೆ!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ಜಾಗತಿಕ ಮುಖಂಡರು ಮತ್ತು ವಿದೇಶಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಮತ್ತು ವಿವಿಐಪಿಗಳು ಉಳಿದುಕೊಂಡಿದ್ದ ಪಂಚತಾರಾ ಹೋಟೆಲ್‌ಗಳ ಸುತ್ತ ಅತ್ಯುನ್ನತ ಮಟ್ಟದ ಝಡ್-ಪ್ಲಸ್ ಮಾದರಿಯ ಭದ್ರತೆ ಕಲ್ಪಿಸಲಾಗಿತ್ತು. ವಿದೇಶಿ ಗಣ್ಯರ ಭದ್ರತೆಗಾಗಿ ಎತ್ತರದ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ರಹಸ್ಯ ಸ್ನೈಪರ್ ತುಕಡಿಗಳನ್ನು (Overwatch team) ನಿಯೋಜಿಸಲಾಗಿತ್ತು.
ದೆಹಲಿ ಪೊಲೀಸ್‌ನ ನಾರ್ತ್‌ವೆಸ್ಟ್ ವಿಭಾಗದ ‘ಫಾರಿನರ್ಸ್ ಸೆಲ್’ನಲ್ಲಿ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ಬಂಗಾರ್ (Deepak Bangar) ಎಂಬುವವರನ್ನು ಸೆಂಟ್ರಲ್ ದೆಹಲಿಯ ಐಷಾರಾಮಿ ಹೋಟೆಲ್ ಮೇಲ್ಛಾವಣಿಯ ಸ್ನೈಪರ್ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ನಿಯೋಜಿಸಲಾಗಿತ್ತು.
ರೀಲ್ಸ್‌ನಲ್ಲಿ ಏನಿತ್ತು? ಭದ್ರತಾ ಲೋಪವಾಗಿದ್ದು ಹೇಗೆ?
ದೀಪಕ್ ಬಂಗಾರ್ ತನ್ನ ಅಧಿಕೃತ ಗುರುತಿನ ಚೀಟಿ ಧರಿಸಿ, ಕರ್ತವ್ಯ ಸ್ಥಳದಲ್ಲೇ ಕ್ಯಾಮೆರಾ ಮುಂದೆ ಬಂದೂಕು ಪ್ರದರ್ಶಿಸಿ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು.
- ಒಂದು ವಿಡಿಯೋದಲ್ಲಿ ಸಿವಿಲ್ ಡ್ರೆಸ್‌ನಲ್ಲಿದ್ದ ದೀಪಕ್, ಸೊಂಟದಲ್ಲಿದ್ದ ಸರ್ವೀಸ್ ಪಿಸ್ತೂಲನ್ನು ಪ್ರದರ್ಶಿಸುತ್ತಾ ಪೋಸ್ ಕೊಟ್ಟಿದ್ದರು.
- ಮತ್ತೊಂದು ವಿಡಿಯೋದಲ್ಲಿ ರಾತ್ರಿ ವೇಳೆ ಹೋಟೆಲ್ ಮೇಲ್ಛಾವಣಿಯ ಮೇಲೆ ಸ್ನೈಪರ್ ರೈಫಲ್‌ನ ಸ್ಕೋಪ್ (ದೂರದರ್ಶಕ) ಮೂಲಕ ಗುರಿ ಇಡುತ್ತಿರುವುದು ಮತ್ತು ಹಿನ್ನೆಲೆಯಲ್ಲಿ ವಿದೇಶಿ ಗಣ್ಯರು ಉಳಿದುಕೊಂಡಿದ್ದ ಸೂಕ್ಷ್ಮ ಕಟ್ಟಡಗಳು ಸ್ಪಷ್ಟವಾಗಿ ಸೆರೆಯಾಗಿದ್ದವು.
- ಮೂರನೇ ವಿಡಿಯೋದಲ್ಲಿ ಮೇಲ್ಛಾವಣಿಯಲ್ಲಿದ್ದ ಇತರೆ ಭದ್ರತಾ ಸಿಬ್ಬಂದಿ ಹಾಗೂ ಅತ್ಯಾಧುನಿಕ ಉಪಕರಣಗಳು ಕಾಣಿಸಿಕೊಂಡಿದ್ದವು.
ವಿವಿಐಪಿಗಳ ಭದ್ರತೆಯಲ್ಲಿ ಸ್ನೈಪರ್‌ಗಳಿರುವ ಜಾಗ ಮತ್ತು ಆಂಗಲ್ ಅತ್ಯಂತ ರಹಸ್ಯವಾಗಿರಬೇಕಾಗುತ್ತದೆ. ಆದರೆ, ಈ ವಿಡಿಯೋಗಳನ್ನು ದೀಪಕ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದರಿಂದ, ಭದ್ರತಾ ಪಡೆಯ ನಿಖರ ಲೊಕೇಶನ್ ಹಾಗೂ ಭದ್ರತಾ ವ್ಯವಸ್ಥೆಯ ಸಂಪೂರ್ಣ ಚಿತ್ರಣ ಸಾರ್ವಜನಿಕವಾಗಿ ಜಗತ್ತಿಗೆ ತೆರೆದುಕೊಂಡಂತಾಯಿತು.
ತೀವ್ರ ಆಕ್ರೋಶ ಮತ್ತು ಇಲಾಖಾ ಕ್ರಮ
ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ದೆಹಲಿ ಪೊಲೀಸರ ಭದ್ರತಾ ವೈಫಲ್ಯ ಹಾಗೂ ಕಾನ್‌ಸ್ಟೆಬಲ್‌ನ ಬೇಜವಾಬ್ದಾರಿತನದ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದರು. ವಿಷಯ ಹಿರಿಯ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆಯೇ ದೆಹಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ.
ತಕ್ಷಣವೇ ಜಾರಿಗೆ ಬರುವಂತೆ ಕಾನ್‌ಸ್ಟೆಬಲ್ ದೀಪಕ್ ಬಂಗಾರ್ ಅವರನ್ನು ಕರ್ತವ್ಯದಿಂದ ತೆಗೆದುಹಾಕಿ ಅಮಾನತು (Suspend) ಮಾಡಲಾಗಿದೆ. ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಬ್ಲಾಕ್ ಮಾಡಲಾಗಿದ್ದು, ಇಷ್ಟು ಸೂಕ್ಷ್ಮ ಪ್ರದೇಶದಲ್ಲಿ ಮೊಬೈಲ್ ಬಳಕೆ ಮಾಡಿ ವಿಡಿಯೋ ಮಾಡಲು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಇಲಾಖಾ ತನಿಖೆಗೆ ಆದೇಶಿಸಿದ್ದಾರೆ













