ಕರ್ನಾಟಕದ ಶಿಲ್ಪಕಲೆಯ ತೊಟ್ಟಿಲು,ಪ್ರಕೃತಿ ಸೌಂದರ್ಯದ ತವರೂರು ಎಂದೇ ಖ್ಯಾತಿ ಪಡೆದಿರುವ ಜಿಲ್ಲೆ ಹಾಸನ. ಹೊಯ್ಸಳ ಸಾಮ್ರಾಜ್ಯದ ಹೆಮ್ಮೆಯ ಇತಿಹಾಸ, ಪಶ್ಚಿಮ ಘಟ್ಟಗಳ ರಮಣೀಯ ದೃಶ್ಯಾವಳಿ ಹಾಗೂ ಧಾರ್ಮಿಕ ಹಿರಿಮೆ ಹಾಸನವನ್ನು ಪ್ರವಾಸಿಗರ ಸ್ವರ್ಗವನ್ನಾಗಿಸಿದೆ. ನೀವು ಹಾಸನ ಪ್ರವಾಸ ಕೈಗೊಳ್ಳುವ ಪ್ಲಾನ್ನಲ್ಲಿದ್ದರೆ, ತಪ್ಪದೇ ಭೇಟಿ ನೀಡಲೇಬೇಕಾದ ಹಾಸನದ ಏಳು ಅದ್ಭುತ ತಾಣಗಳ ವಿವರ ಇಲ್ಲಿದೆ.
೧.ಶ್ರವಣಬೆಳಗೊಳ

ಹಾಸನ ಕಡೆ ಹೊರಟ್ರೆ ಮೊದಲು ನೆನಪಾಗೋದೇ ಶ್ರವಣಬೆಳಗೊಳ. ಬೆಟ್ಟ ಹತ್ತಿ ಮೇಲೆ ಹೋದ್ರೆ ಸಾಕು, 58 ಅಡಿ ಎತ್ತರದ ಬಾಹುಬಲಿ ಸ್ವಾಮಿಯ ದೊಡ್ಡ ಮೂರ್ತಿ ಕಾಣುತ್ತೆ. ಇಷ್ಟು ದೊಡ್ಡ ಒಂಟಿ ಕಲ್ಲಿನ ಮೂರ್ತಿ ಬೇರೆಲ್ಲೂ ಸಿಗಲ್ಲ. ಹನ್ನೆರಡು ವರ್ಷಕ್ಕೊಮ್ಮೆ ನಡೆಯೋ ಮಹಾಮಸ್ತಕಾಭಿಷೇಕ ನೋಡೋಕಂತೂ ದೇಶ ವಿದೇಶದಿಂದ ಜನ ಮುಗಿಬಿದ್ದು ಬರ್ತಾರೆ
೨.ಬೇಲೂರು ಚೆನ್ನಕೇಶವ ಗುಡಿ

ಬೇಲೂರು ದೇವಸ್ಥಾನ ನೋಡಿದ್ರೆ ಅಬ್ಬಾ, ಕಲ್ಲಿನಲ್ಲೂ ಇಷ್ಟೊಂದು ಚಂದ ಕೆತ್ತನೆ ಮಾಡ್ಬೋದಾ ಅಂತ ಅನಿಸುತ್ತೆ. ನಕ್ಷತ್ರದ ಆಕಾರದಲ್ಲಿರೋ ಜಾಗ, ತಿರುಗಿಸೋ ಕಂಬಗಳು, ಮತ್ತೆ ಕನ್ನಡಿ ಹಿಡಿದಿರೋ ದರ್ಪಣ ಸುಂದರಿ ಶಿಲ್ಪಗಳನ್ನ ನೋಡೋಕೆ ಎರಡು ಕಣ್ಣು ಸಾಲಲ್ಲ. ಎಷ್ಟು ಹೊತ್ತು ನಿಂತು ನೋಡಿದ್ರೂ ನಮಗೆ ಬೋರ್ ಆಗಲ್ಲ
೩. ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನ

ಬೇಲೂರಿನಿಂದ ಸ್ವಲ್ಪ ಮುಂದೆ ಹೋದ್ರೆ ಹಳೇಬೀಡು ಸಿಗುತ್ತೆ. ಇಲ್ಲಿನ ದೇವಸ್ಥಾನದ ಹೊರಗಡೆ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ಕಥೆಗಳನ್ನೇ ಕಲ್ಲಿನಲ್ಲಿ ಬಿಡಿಸಿಟ್ಟಿದ್ದಾರೆ. ನೂರಾರು ಆನೆ, ಕುದುರೆ, ಯುದ್ಧದ ಸೀನ್ಗಳನ್ನೆಲ್ಲ ಕಲ್ಲಿನಲ್ಲೇ ಕೆತ್ತಿರೋದು ನೋಡಿದ್ರೆ ಆ ಕಾಲದ ಶಿಲ್ಪಿಗಳಿಗೆ ಹ್ಯಾಟ್ಸಾಫ್ ಹೇಳಲೇಬೇಕು.
೪. ಶೆಟ್ಟಿಹಳ್ಳಿ ಚರ್ಚ್

ಇದು ಮಾತ್ರ ಹಾಸನದಲ್ಲೇ ಒಂಥರಾ ಡಿಫರೆಂಟ್ ಜಾಗ. ಮಳೆಗಾಲ ಬಂದ್ರೆ ಹೇಮಾವತಿ ಡ್ಯಾಂ ಹಿನ್ನೀರಲ್ಲಿ ಈ ಚರ್ಚ್ ಅರ್ಧ ಮುಳುಗೋಗುತ್ತೆ, ಬರೀ ನೀರಲ್ಲೇ ತೇಲಿದಂಗೆ ಕಾಣುತ್ತೆ. ಬೇಸಿಗೆಯಲ್ಲಿ ಹೋದ್ರೆ ಪೂರ್ತಿ ಚರ್ಚ್ ಒಳಗಡೆ ಹೋಗಿ ನೋಡಬಹುದು. ಸಂಜೆ ಟೈಮಲ್ಲಿ ಫೋಟೋ, ರೀಲ್ಸ್ ಮಾಡೋಕಂತೂ ಇದು ಸೂಪರ್ ಸ್ಪಾಟ್
೫. ಮಂಜರಾಬಾದ್ ಕೋಟೆ, ಸಕಲೇಶಪುರ

ಸಕಲೇಶಪುರದ ಹತ್ರ ಇರೋ ಈ ಕೋಟೆಯನ್ನ ಟಿಪ್ಪು ಸುಲ್ತಾನ್ ಕಟ್ಟಿಸಿದ್ದು. ಕೆಳಗಿಂದ ನೋಡಿದ್ರೆ ಸಾಮಾನ್ಯ ಬೆಟ್ಟದ ತರ ಕಾಣುತ್ತೆ, ಆದ್ರೆ ಡ್ರೋನ್ನಲ್ಲಿ ನೋಡಿದ್ರೆ ಪಕ್ಕಾ ಸ್ಟಾರ್ ಶೇಪ್ನಲ್ಲಿದೆ! ಕೋಟೆ ಮೇಲೆ ಹತ್ತಿ ನಿಂತ್ರೆ ಸುತ್ತಲೂ ಸಕಲೇಶಪುರದ ತಂಪಾದ ಹಸಿರು ಗುಡ್ಡಗಳು, ತಣ್ಣನೆ ಗಾಳಿ ಸಖತ್ ಫೀಲ್ ಕೊಡುತ್ತೆ.
೬. ಬಿಸಿಲೆ ಘಾಟ್

ನೇಚರ್ ಪ್ರಿಯರಿಗಂತೂ ಬಿಸಿಲೆ ಘಾಟ್ ಒಂಥರಾ ಸ್ವರ್ಗ ಇದ್ದಂಗೆ. ಇಲ್ಲಿ ವ್ಯೂ ಪಾಯಿಂಟ್ ಹತ್ರ ನಿಂತ್ಕೊಂಡ್ರೆ ಸಾಕು, ಕುಮಾರಪರ್ವತ, ಪುಷ್ಪಗಿರಿ ಸಾಲು ಸಾಲು ಬೆಟ್ಟಗಳು ಕಣ್ಮುಂದೆ ಕಾಣ್ಸುತ್ತೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ಮಂಜು ಮುಸುಕಿದ ರಸ್ತೆಯಲ್ಲಿ ಗಾಡಿ ಓಡಿಸಿಕೊಂಡು ಹೋಗೋ ಮಜಾನೇ ಬೇರೆ.
೭. ಗೊರೂರು ಡ್ಯಾಂ (ಹೇಮಾವತಿ ಜಲಾಶಯ)

ಹಾಸನ ಹತ್ರನೇ ಸಂಜೆ ಟೈಮ್ ಪಾಸ್ ಮಾಡೋಕೆ ಗೊರೂರು ಡ್ಯಾಂ ಬೆಸ್ಟ್. ಮಳೆಗಾಲದಲ್ಲಿ ಡ್ಯಾಂ ಗೇಟ್ ಓಪನ್ ಮಾಡಿದಾಗ ನೀರು ಹಾಲಿನ ನೊರೆ ತರ ಧುಮ್ಮಿಕ್ಕೋದನ್ನ ನೋಡೋಕೆ ಮಸ್ತ್ ಆಗಿರುತ್ತೆ. ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಹೋಗಿ ಕೂತು ರಿಲ್ಯಾಕ್ಸ್ ಆಗೋಕೆ ಹೇಳಿಮಾಡಿಸಿದ ಜಾಗ.













