ದೆಹಲಿ: ಕ್ರಿಕೆಟ್ ಪ್ರಿಯರಿಗೆ ಭಾನುವಾರ ಪೂರ್ಣ ಪ್ರಮಾಣದ ಮನರಂಜನೆ ಸಿಗಲಿದೆ. ಒಂದೇ ದಿನ ಭಾರತ ತಂಡದ ಎರಡು ಮಹತ್ವದ ಪಂದ್ಯಗಳು ನಡೆಯಲಿದ್ದು, ಸಂಜೆ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಪುರುಷರ ತಂಡ ಮೊದಲ ಟಿ20 ಪಂದ್ಯ ಆಡಲಿದ್ದರೆ, ರಾತ್ರಿ ದುಬೈ ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡ ಏಷ್ಯಾ ಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗಲಿದೆ.
ದೆಹಲಿಯಲ್ಲಿ ಅಫ್ಘಾನ್ ಸವಾಲು
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸಂಜೆ 7:00 ಗಂಟೆಗೆ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟಿ20 ಆರಂಭವಾಗಲಿದೆ. ತಾಂತ್ರಿಕವಾಗಿ ಇದು ಅಫ್ಘಾನಿಸ್ತಾನದ ತವರು ಸರಣಿಯಾಗಿದ್ದರೂ, ಭಾರತದ ನೆಲದಲ್ಲೇ ಆಯೋಜನೆಗೊಂಡಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡದಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಮಣೆ ಹಾಕಲಾಗಿದೆ. ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಅವರ ಬ್ಯಾಟಿಂಗ್ ಬಲದ ಜೊತೆಗೆ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ತಂಡಕ್ಕೆ ಆಸರೆಯಾಗಲಿದೆ. ಅತ್ತ ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್ ಅವರನ್ನೊಳಗೊಂಡ ಅಫ್ಘಾನ್ ಪಡೆ ಯಾವುದೇ ಹಂತದಲ್ಲೂ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ
ಸಂಜು ಸಾಮ್ಸನ್ ಆಯ್ಕೆ ಮತ್ತೆ ಪ್ಲೇಯಿಂಗ್ ಇಲೆವೆನ್ ತಲೆನೋವು:
ಈ ಸರಣಿಗೆ ಕಳೆದ ಜಿಂಬಾಬ್ವೆ ಪ್ರವಾಸದಲ್ಲಿ ತಂಡದಿಂದ್ದ ಕೈಬಿಟ್ಟಿದ್ದ ಸಂಜುಸಾಮ್ಸನ್ ರನ್ನು ಮತ್ತೆ ಆಯ್ಕೆ ಮಾಡಲಾಗಿದೆ ಇದರಿಂದ ಆರಂಭಿಕರಾಗಿ ಯಾರನ್ನು ಆಡಿಸಬೇಕು ಎಂಬ ಗೊಂದಲ ನಾಯಕ ಶ್ರೇಯಸ್ಸ್ ಅಯ್ಯರ್ ಗೆ ಮತ್ತೆ ಶುರುವಾಗಿದೆ ,ಕಳೆದ ಸರಣಿಯಲ್ಲಿ ಅವಕಾಶ ಪಡೆದಿದ್ದ ವೈಭವ್ ಸೂರ್ಯವಂಶಿ ಅಬ್ಬರಿಸಿದ್ದರು ಆದರೆ ಅಭಿಷೇಕ್ ಶರ್ಮ ಸತತ ವೈಫಲ್ಯ ಗಳನ್ನ ಅನುಭವಿಸಿದ್ದರು ಇದರಿಂದ ಯಾವ ಜೋಡಿ ಆರಂಭಿಕರಾಗಿ ಕಣಕಿಳಿಯಲಿದೆ ಕಾದು ನೋಡಬೇಕಿದೆ.
ಉಭಯ ತಂಡಗಳ ಆಟಗಾರರ ಪಟ್ಟಿ ಇಂತಿದೆ
- ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ಉಪನಾಯಕ), ವೈಭವ್ ಸೂರ್ಯವಂಶಿ, ನಿತೀಶ್ ಕುಮಾರ್ ರೆಡ್ಡಿ, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಯಶ್ ಠಾಕೂರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ.
- ಅಫ್ಘಾನಿಸ್ತಾನ ತಂಡ: ಇಬ್ರಾಹಿಂ ಝದ್ರನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ನೂರ್ ಉಲ್ ರೆಹಮಾನ್, ದರ್ವಿಶ್ ರಸೂಲಿ, ಸೇದಿಕುಲ್ಲಾ ಅಟಲ್, ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ನಂಗೆಯಲಿಯಾ ಖರೋಟೆ, ಅಬ್ದುಲ್ಲಾ ಅಹ್ಮದ್ಝಾಯ್, ಫಜಲ್ಹಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್.
ಲಂಕಾ ವಿರುದ್ಧ ವನಿತೆಯರ ಸೇಡಿನ ಫೈನಲ್
ಇನ್ನೊಂದೆಡೆ, ರಾತ್ರಿ 8:00 ಗಂಟೆಗೆ ಆರಂಭವಾಗಲಿರುವ ಮಹಿಳಾ ಏಷ್ಯಾ ಕಪ್ ಮಹಾ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಕಳೆದ ಆವೃತ್ತಿಯ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಛಲದಲ್ಲಿರುವ ಭಾರತೀಯ ವನಿತೆಯರು, ದಾಖಲೆಯ 8ನೇ ಬಾರಿಗೆ ಏಷ್ಯಾ ಕಪ್ ಕಿರೀಟ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.
ನೇರಪ್ರಸಾರದ ವಿವರ
- ಭಾರತ vs ಅಫ್ಘಾನಿಸ್ತಾನ (ಟಿ20): ಸಂಜೆ 7:00 ಗಂಟೆಗೆ ಆರಂಭ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಫ್ಯಾನ್‌ಕೋಡ್ (FanCode) ಆ್ಯಪ್‌ನಲ್ಲಿ ವೀಕ್ಷಿಸಬಹುದು.
- ಭಾರತ vs ಶ್ರೀಲಂಕಾ (ಏಷ್ಯಾ ಕಪ್ ಫೈನಲ್): ರಾತ್ರಿ 8:00 ಗಂಟೆಗೆ ಆರಂಭ. ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳು ಹಾಗೂ ಸೋನಿ ಲೈವ್ (SonyLIV) ಆ್ಯಪ್‌ನಲ್ಲಿ ನೇರಪ್ರಸಾರ ಲಭ್ಯವಿರಲಿದೆ












