ಧರ್ಮ ಮತ್ತು ಅಧರ್ಮದ ಸಂಘರ್ಷ: ಭಗವದ್ಗೀತೆಯ ಮೊದಲ ಶ್ಲೋಕದಲ್ಲೇ ಅಡಗಿದೆ ದೊಡ್ಡ ರಹಸ್ಯ!

1000084565

ಭಗವದ್ಗೀತಾ

ಅಧ್ಯಾಯ 1: ಅರ್ಜುನ ವಿಷಾದ ಯೋಗ | ಶ್ಲೋಕ 1


ಧೃತರಾಷ್ಟ್ರ ಉವಾಚ:
ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ |
ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ

ಹಸ್ತಿನಾವತಿಯ ಅರಮನೆಯಲ್ಲಿ ವಾತಾವರಣ ತೀರ ಗಂಭೀರವಾಗಿತ್ತು. ಹೊರಗೆ ಯಾವುದೇ ಕ್ಷಣದಲ್ಲಾದರೂ ಮಹಾಸಂಗ್ರಾಮ ಶುರುವಾಗುವ ಆತಂಕ. ಒಳಗಡೆ ಅಂಧ ರಾಜ ಧೃತರಾಷ್ಟ್ರ ತನ್ನ ಸಿಂಹಾಸನದ ಮೇಲೆ ಕುಳಿತು ತಳಮಳಿಸುತ್ತಿದ್ದ.

ಯುದ್ಧ ತಪ್ಪಿಸಲು ಶ್ರೀಕೃಷ್ಣ ಮಾಡಿದ ಎಲ್ಲ ಸಂಧಾನ ಪ್ರಯತ್ನಗಳೂ ವಿಫಲವಾಗಿದ್ದವು. ಧೃತರಾಷ್ಟ್ರನ ಮಗ ದುರ್ಯೋಧನ ಸೂಜಿಯ ಮೊನೆಯಷ್ಟು ಜಾಗವನ್ನೂ ಪಾಂಡವರಿಗೆ ಕೊಡಲು ಒಪ್ಪಿರಲಿಲ್ಲ. ಅಂತಿಮವಾಗಿ ಇಡೀ ಭಾರತವರ್ಷದ ಮಹಾರಥಿಗಳೆಲ್ಲ ಕುರುಕ್ಷೇತ್ರದ ಮೈದಾನದಲ್ಲಿ ಎರಡು ಬಣಗಳಾಗಿ ಜಮಾಯಿಸಿದ್ದರು.

1000084568455842828221477509

​ಧೃತರಾಷ್ಟ್ರನಿಗೆ ಕಣ್ಣು ಕಾಣಿಸುತ್ತಿರಲಿಲ್ಲ, ಆದರೆ ಆತನ ಎದೆಯೊಳಗೆ ನಡೆಯುತ್ತಿದ್ದ ಆತಂಕದ ಯುದ್ಧ ರಣರಂಗಕ್ಕಿಂತಲೂ ಭೀಕರವಾಗಿತ್ತು. ಅವನ ಪಕ್ಕದಲ್ಲೇ ಸಾರಥಿ ಸಂಜಯ ಕುಳಿತಿದ್ದ. ಮಹರ್ಷಿ ವೇದವ್ಯಾಸರು ಸಂಜಯನಿಗೆ ದಿವ್ಯದೃಷ್ಟಿಯ ವರ ನೀಡಿದ್ದರು. ಅರಮನೆಯ ಕೋಣೆಯಲ್ಲಿ ಕುಳಿತೇ ನೂರಾರು ಮೈಲಿ ದೂರದ ಕುರುಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನು ಕಣ್ಣಾರೆ ಕಂಡು ವಿವರಿಸುವ ಅಪೂರ್ವ ಶಕ್ತಿ ಸಂಜಯನಿಗಿತ್ತು.

ಧೃತರಾಷ್ಟ್ರನ ಮನಸ್ಸನ್ನು ಒಂದು ದೊಡ್ಡ ಭಯ ಕಾಡುತ್ತಿತ್ತು. ಕುರುಕ್ಷೇತ್ರ ಕೇವಲ ಒಂದು ಮೈದಾನವಾಗಿರಲಿಲ್ಲ, ಅದು ಹಿಂದಿನಿಂದಲೂ ಋಷಿ-ಮುನಿಗಳು ತಪಸ್ಸು ಮಾಡಿದ ಪವಿತ್ರ ಧರ್ಮಭೂಮಿ. ಆ ಪವಿತ್ರ ಕ್ಷೇತ್ರದ ಪ್ರಭಾವದಿಂದ ತನ್ನ ಅಧರ್ಮಿ ಮಕ್ಕಳ ಮನಸ್ಸು ಬದಲಾಗಿ ಯುದ್ಧ ಬಿಟ್ಟುಬಿಡುತ್ತಾರೋ? ಅಥವಾ ಧರ್ಮದ ಪರವಾಗಿರುವ ಪಾಂಡವರಿಗೆ ಆ ಕ್ಷೇತ್ರದ ದೈವಿಕ ಬಲ ಸಿಕ್ಕು ತನ್ನ ಮಕ್ಕಳು ಸೋತು ಸಾಯುತ್ತಾರೋ ಎಂಬ ಆತಂಕ ಅವನಲ್ಲಿತ್ತು.

10000845705760894982573204440

​ಜೊತೆಗೆ ಅವನ ಮಾತಿನಲ್ಲೇ ಸ್ವಾರ್ಥವಿತ್ತು. ಪಾಂಡವರು ತನ್ನದೇ ತಮ್ಮ ಪಾಂಡುವಿನ ಮಕ್ಕಳು, ಆದರೆ ಆತ ಅವರನ್ನು ಎಂದಿಗೂ ತನ್ನವರೆಂದು ಒಪ್ಪಿಕೊಳ್ಳಲೇ ಇಲ್ಲ. ತನ್ನ ಮಗ ದುರ್ಯೋಧನನ ಸಿಂಹಾಸನದ ವ್ಯಾಮೋಹವೇ ಆತನ ಕಣ್ಣು ಮುಚ್ಚಿಸಿತ್ತು.

​ತಾಳಲಾರದೆ ಧೃತರಾಷ್ಟ್ರ ಸಂಜಯನ ಕಡೆ ಮುಖ ಮಾಡಿ ನಡುಗುವ ದನಿಯಲ್ಲಿ ಕೇಳಿದ:

“ಸಂಜಯ, ಆ ಪವಿತ್ರ ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧ ಮಾಡಲೇಬೇಕೆಂದು ಹಠ ತೊಟ್ಟು ಜಮಾಯಿಸಿರುವ ನನ್ನ ಮಕ್ಕಳು ಮತ್ತು ಪಾಂಡವರು ಈಗ ಅಲ್ಲಿ ಏನು ಮಾಡುತ್ತಿದ್ದಾರೆ?”

​ಧೃತರಾಷ್ಟ್ರನ ಈ ಪ್ರಶ್ನೆಯೇ ಮಹಾಭಾರತದ ಆಳವಾದ ಸತ್ಯಕ್ಕೆ, ಶ್ರೀಕೃಷ್ಣನ ಗೀತಾ ಸಂದೇಶಕ್ಕೆ ಮುನ್ನುಡಿಯಾಯಿತು.

Leave a Comment

Your email address will not be published. Required fields are marked *