💼 ಉದ್ಯೋಗ ಸುದ್ದಿಗಳು 🏏 ಕ್ರೀಡಾ ಸುದ್ದಿ ✨ ದಿನಭವಿಷ್ಯ 🇮🇳 ರಾಷ್ಟ್ರೀಯ ಸುದ್ದಿ

ಕೊನೆಗೂ ಹಾಸನ-ಬೇಲೂರು 4 ಪಥ ರಸ್ತೆ ಯೋಜನೆಗೆ ಸಿಕ್ತು ಗ್ರೀನ್ ಸಿಗ್ನಲ್; ನವೆಂಬರ್‌ನಲ್ಲಿ ಭೂಸ್ವಾಧೀನ, ಡಿಸೆಂಬರ್‌ನಲ್ಲಿ ಕಾಮಗಾರಿ 

ಹಾಸನ: ಜಿಲ್ಲೆಯ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹಾಸನ – ಬೇಲೂರು ನಡುವಿನ ಚತುಷ್ಪಥ ರಸ್ತೆ (Four-lane road) ಅಭಿವೃದ್ಧಿ ಯೋಜನೆಗೆ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗಿದ್ದು, ₹426 ಕೋಟಿ ಪರಿಷ್ಕೃತ ವೆಚ್ಚದ ಅಂದಾಜಿಗೆ ಕೇಂದ್ರ ಸರ್ಕಾರದಿಂದ ಅಧಿಕೃತ ಅನುಮೋದನೆ ದೊರೆತಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ತಿಳಿಸಿದ್ದಾರೆ.

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಯ ಪ್ರಗತಿ ಮತ್ತು ಮುಂದಿನ ಹಂತಗಳ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.

ಭೂಸ್ವಾಧೀನ ಪ್ರಕ್ರಿಯೆ ಚುರುಕು: ನವೆಂಬರ್‌ಗೆ ಪೂರ್ಣ

ಯೋಜನೆ ಶೀಘ್ರವಾಗಿ ಕಾರ್ಯರೂಪಕ್ಕೆ ಬರಲು ಅತ್ಯಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಈಗಾಗಲೇ ಚುರುಕುಗೊಳಿಸಲಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಹೆಚ್ಚುವರಿ ಕಾಲಾವಕಾಶ ಪಡೆದುಕೊಳ್ಳಲಾಗಿದ್ದು, ನವೆಂಬರ್ ಅಂತ್ಯದೊಳಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸುವ ಸ್ಪಷ್ಟ ಗುರಿ ಹೊಂದಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಚುರುಕು: ನವೆಂಬರ್‌ಗೆ ಪೂರ್ಣ

ಭೂಸ್ವಾಧೀನ ಪ್ರಕ್ರಿಯೆ ನವೆಂಬರ್‌ನಲ್ಲಿ ಪೂರ್ಣಗೊಳ್ಳುತ್ತಿದ್ದಂತೆಯೇ, ಡಿಸೆಂಬರ್ ತಿಂಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಅಧಿಕೃತವಾಗಿ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ರಸ್ತೆ ನಿರ್ಮಾಣದಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾದ ಬೇಲೂರು ಹಾಗೂ ಹಾಸನ ನಗರದ ನಡುವಿನ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಪ್ರಯಾಣಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ನಿರಂತರ ಪ್ರಯತ್ನಕ್ಕೆ ಫಲ: ಸಚಿವ ಗಡ್ಕರಿ ಭೇಟಿ

ಈ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಸಂಸದರು, “ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಎರಡು-ಮೂರು ಬಾರಿ ಖುದ್ದಾಗಿ ಭೇಟಿ ಮಾಡಿ, ಈ ಯೋಜನೆಯಲ್ಲಿ ಉಂಟಾಗಿದ್ದ ತಾಂತ್ರಿಕ ಹಾಗೂ ಆರ್ಥಿಕ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು. ನಮ್ಮ ನಿರಂತರ ಮನವಿಯ ಪರಿಣಾಮವಾಗಿ, ಸುಮಾರು 20 ದಿನಗಳ ಹಿಂದೆ ಪರಿಷ್ಕೃತ ಅಂದಾಜು ಮೊತ್ತ ₹426 ಕೋಟಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿದೆ” ಎಂದು ತಿಳಿಸಿದರು.

2023ರಲ್ಲಿ ಭೂಮಿಪೂಜೆ ನೆರವೇರಿದ್ದ ಯೋಜನೆ

​ಈ ರಸ್ತೆ ಅಭಿವೃದ್ಧಿ ಯೋಜನೆಗೆ 2023ರಲ್ಲೇ ಭೂಮಿಪೂಜೆ ನೆರವೇರಿ ಪ್ರಾಥಮಿಕ ಅನುಮೋದನೆ ದೊರೆತಿತ್ತು. ಆದರೆ, ನಂತರದ ದಿನಗಳಲ್ಲಿ ಭೂಸ್ವಾಧೀನ ವೆಚ್ಚದಲ್ಲಿ ಭಾರಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಹಲವಾರು ತಾಂತ್ರಿಕ ಸಮಸ್ಯೆಗಳಿಂದಾಗಿ ಯೋಜನೆಯು ನಿರೀಕ್ಷಿತ ವೇಗದಲ್ಲಿ ಮುನ್ನಡೆಯದೆ ನೆನೆಗುದಿಗೆ ಬಿದ್ದಿತ್ತು.

2024ರಲ್ಲಿ ಸಂಸದರಾಗಿ ಆಯ್ಕೆಯಾದ ಬಳಿಕ, ಈ ಯೋಜನೆಗೆ ಮರುಜೀವ ನೀಡಲು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರಂತರ ಸಭೆಗಳನ್ನು ನಡೆಸಿ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿರುವುದಾಗಿ ಶ್ರೇಯಸ್ ಪಟೇಲ್ ವಿವರಿಸಿದರು. 

Leave a Comment

Your email address will not be published. Required fields are marked *