ನಿಶಿನ್: ಏಷ್ಯನ್ ಗೇಮ್ಸ್ 2026ರ ಪುರುಷರ ಟಿ20 ಕ್ರಿಕೆಟ್ ಟೂರ್ನಿಯ 2ನೇ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ತಂಡವು ಅಮೋಘ ಪ್ರದರ್ಶನ ನೀಡಿದೆ. ಶ್ರೀಲಂಕಾ ತಂಡವನ್ನು ಕೇವಲ 45 ರನ್ಗಳಿಗೆ ಆಲೌಟ್ ಮಾಡುವ ಮೂಲಕ 124 ರನ್ಗಳ ಬೃಹತ್ ಅಂತರದ ಗೆಲುವು ದಾಖಲಿಸಿದ ಭಾರತ ತಂಡವು ನೇರವಾಗಿ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ.
ಇಶಾನ್ ಕಿಶನ್ ಸ್ಫೋಟಕ ಅರ್ಧಶತಕ, ಭಾರತ 169 ರನ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ಗಳ ಸವಾಲಿನ ಮೊತ್ತ ಕಲೆಹಾಕಿತು. ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ಗಳೊಂದಿಗೆ 38 ರನ್ ಚಚ್ಚಿ ಉತ್ತಮ ಆರಂಭ ಒದಗಿಸಿದರು. ನಂತರ ಅಭಿಷೇಕ್ ಶರ್ಮಾ (7), ಸಂಜು ಸ್ಯಾಮ್ಸನ್ (7) ಹಾಗೂ ನಾಯಕ ಶ್ರೇಯಸ್ ಅಯ್ಯರ್ (13) ಬೇಗನೆ ಪೆವಿಲಿಯನ್ ಸೇರಿದರು. ಆದರೆ ಏಕಾಂಗಿ ಹೋರಾಟ ನಡೆಸಿದ ವಿಕೆಟ್ಕೀಪರ್ ಬ್ಯಾಟರ್ ಇಶಾನ್ ಕಿಶನ್ ಶ್ರೀಲಂಕಾ ಬೌಲರ್ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 46 ಎಸೆತಗಳನ್ನು ಎದುರಿಸಿದ ಕಿಶನ್ 4 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 80 ರನ್ ಬಾರಿಸಿ ತಂಡ ಗೌರವಾನ್ವಿತ ಮೊತ್ತ ಗಳಿಸಲು ಪ್ರಮುಖ ಕಾರಣರಾದರು. ಅಂತಿಮವಾಗಿ ವಾಷಿಂಗ್ಟನ್ ಸುಂದರ್ ಅಜೇಯ 7 ರನ್ ಗಳಿಸಿದರು. ಶ್ರೀಲಂಕಾ ಪರ ಸಹನ್ ಅರಚ್ಚಿಗೆ ಹಾಗೂ ತರಿಂದು ರತ್ನಾಯಕೆ ತಲಾ 2 ವಿಕೆಟ್ ಪಡೆದರು.
ಬುಮ್ರಾ, ಅಕ್ಷರ್ ಹಾಗೂ ಅಭಿಷೇಕ್ ದಾಳಿಗೆ ಕೇವಲ 45ಕ್ಕೆ ಲಂಕಾ ಉಡೀಸ್:
170 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡವು ಭಾರತದ ಮಾರಕ ಬೌಲಿಂಗ್ ಎದುರು ಸಂಪೂರ್ಣ ತತ್ತರಿಸಿ ಹೋಯಿತು. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲೇ ಸಿನೆತ್ ಜಯವರ್ಧನೆ (0) ಹಾಗೂ ಸೋಹನ್ ಡಿ ಲಿವೇರಾ (0) ಅವರನ್ನು ಔಟ್ ಮಾಡಿ ಆಘಾತ ನೀಡಿದರು. ಲಸಿತ್ ಕ್ರೂಸ್ಪುಲ್ಲೆ (0) ಖಾತೆ ತೆರೆಯದೆ ರನೌಟ್ ಆದರು. ಶ್ರೀಲಂಕಾ ಪರ ನುವಾನಿಡು ಫರ್ನಾಂಡೋ ಗಳಿಸಿದ 15 ರನ್ಗಳೇ ಗರಿಷ್ಠ ವೈಯಕ್ತಿಕ ಮೊತ್ತವಾಯಿತು. ಉಳಿದಂತೆ ನಾಯಕ ಸಹನ್ ಅರಚ್ಚಿಗೆ (9) ಮತ್ತು ತರಿಂದು ರತ್ನಾಯಕೆ (5) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಪರಿಣಾಮವಾಗಿ ಶ್ರೀಲಂಕಾ ತಂಡವು ಕೇವಲ 9.5 ಓವರ್ಗಳಲ್ಲಿ 45 ರನ್ಗಳಿಗೆ ಸರ್ವಪತನ ಕಂಡಿತು.
ಭಾರತದ ಪರ ಜಸ್ಪ್ರೀತ್ ಬುಮ್ರಾ 2 ಓವರ್ಗಳಲ್ಲಿ 7 ರನ್ ನೀಡಿ 2 ವಿಕೆಟ್, ಅಕ್ಷರ್ ಪಟೇಲ್ 3 ಓವರ್ಗಳಲ್ಲಿ 8 ರನ್ ನೀಡಿ 2 ವಿಕೆಟ್, ವಾಷಿಂಗ್ಟನ್ ಸುಂದರ್ 1 ವಿಕೆಟ್ ಹಾಗೂ ಅಂತಿಮವಾಗಿ ದಾಳಿಗಿಳಿದ ಅಭಿಷೇಕ್ ಶರ್ಮಾ ಕೇವಲ 0.5 ಓವರ್ಗಳಲ್ಲಿ 2 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಚಿನ್ನದ ಪದಕಕ್ಕಾಗಿ ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಫೈನಲ್:
ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಪಾಕಿಸ್ತಾನ ತಂಡ ಈಗಾಗಲೇ ಫೈನಲ್ ತಲುಪಿದೆ. ಇದೀಗ ಶ್ರೀಲಂಕಾವನ್ನು ಮಣಿಸಿರುವ ಭಾರತ ತಂಡವು ಅಕ್ಟೋಬರ್ 3ರ ಶನಿವಾರ ಬೆಳಿಗ್ಗೆ 10:00 ಗಂಟೆಗೆ ನಡೆಯಲಿರುವ ಗೋಲ್ಡ್ ಮೆಡಲ್ ಪಂದ್ಯದಲ್ಲಿ (Gold Medal Match) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಮತ್ತೊಂದೆಡೆ ಕಂಚಿನ ಪದಕಕ್ಕಾಗಿ (Bronze Medal Match) ಅಕ್ಟೋಬರ್ 3ರ ಬೆಳಿಗ್ಗೆ 05:30ಕ್ಕೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ.













