ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಮತ್ತು ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಿಸಲು ಕರ್ನಾಟಕ ಸರ್ಕಾರ ಕಠಿಣ ಹೆಜ್ಜೆಗಳನ್ನು ಇಡಲು ಮುಂದಾಗಿದೆ. ಕಳಪೆ ಗುಣಮಟ್ಟದ ಹಾಗೂ ಅಪೂರ್ಣ ರಕ್ಷಣೆ ನೀಡುವ ಹಾಫ್ ಹೆಲ್ಮೆಟ್ಗಳ ಬಳಕೆಗೆ ಶಾಶ್ವತವಾಗಿ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಸಿದ್ಧತೆ ನಡೆಸುತ್ತಿದೆ. ಇದರ ಜೊತೆಗೆ ಸಾಮಾನ್ಯ ಜನರಿಗೆ ಹೊರೆಯಾಗುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಪರಿಷ್ಕರಣೆಯೂ ಮುನ್ನೆಲೆಗೆ ಬಂದಿದೆ.
ಹಾಫ್ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟಕ್ಕೆ ಕಡಿವಾಣ:
ಕೇವಲ ಟ್ರಾಫಿಕ್ ಪೊಲೀಸರ ತಪಾಸಣೆ ಮತ್ತು ದಂಡದಿಂದ ಬಚಾವಾಗಲು ಬಹುತೇಕ ಸವಾರರು ರಸ್ತೆ ಬದಿಯಲ್ಲಿ ಸಿಗುವ ಅಗ್ಗದ ಹಾಫ್ ಹೆಲ್ಮೆಟ್ಗಳನ್ನು ಧರಿಸುತ್ತಿದ್ದಾರೆ. ಇಂತಹ ಹೆಲ್ಮೆಟ್ಗಳು ಅಪಘಾತದ ಸಮಯದಲ್ಲಿ ಮುಖ ಮತ್ತು ತಲೆಯ ಭಾಗಕ್ಕೆ ಸೂಕ್ತ ಸುರಕ್ಷತೆ ಒದಗಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ಹಾಫ್ ಹೆಲ್ಮೆಟ್ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಅಗತ್ಯ ಕಾನೂನು ನಿಯಮಗಳನ್ನು ರೂಪಿಸಲಾಗುತ್ತಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಇಂತಹ ಹೆಲ್ಮೆಟ್ ಉತ್ಪಾದಿಸುವ ಕಾರ್ಖಾನೆಗಳು ಮತ್ತು ಘಟಕಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.
ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ಅಮಾನತು, ಗಾಡಿ ಬ್ಲ್ಯಾಕ್ಲಿಸ್ಟ್:
ಸಂಚಾರ ನಿಯಮಗಳನ್ನು ಪದೇ ಪದೇ ಉಲ್ಲಂಘಿಸುವವರ ವಿರುದ್ಧ ಇಲಾಖೆ ಇನ್ನಷ್ಟು ಕಠಿಣವಾಗಲಿದೆ. ಅಪಾಯಕಾರಿ ಚಾಲನೆ, ಅತಿಯಾದ ವೇಗ ಹಾಗೂ ಅಸುರಕ್ಷಿತ ಹೆಲ್ಮೆಟ್ಗಳನ್ನು ಧರಿಸಿ ಸಿಕ್ಕಿಬಿದ್ದರೆ, ಅಂತಹ ಸವಾರರ ಡ್ರೈವಿಂಗ್ ಲೈಸೆನ್ಸ್ (ಡಿಎಲ್) ಅಮಾನತು ಮಾಡುವುದು ಮತ್ತು ಅವರ ವಾಹನವನ್ನು ಬ್ಲ್ಯಾಕ್ಲಿಸ್ಟ್ಗೆ ಸೇರಿಸುವ ಕುರಿತು ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ.
ಬಸ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ:
ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳದ ವಿಚಾರವೂ ಚರ್ಚೆಯಲ್ಲಿದೆ. ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದ ಸಮಿತಿಯು ದರ ಪರಿಷ್ಕರಣೆ ಕುರಿತು ಅಧ್ಯಯನ ನಡೆಸಿ ವರದಿ ಸಿದ್ಧಪಡಿಸುತ್ತಿದೆ. ಈ ಸಮಿತಿ ಶೀಘ್ರದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದು, ವರದಿ ಪರಿಶೀಲಿಸಿದ ಬಳಿಕ ಸಾರಿಗೆ ಬಸ್ ದರ ಹೆಚ್ಚಳದ ಬಗ್ಗೆ ಸರ್ಕಾರ ಅಂತಿಮ ನಿರ್ಧಾರ ಪ್ರಕಟಿಸಲಿದೆ.













