KEA ಕಾರಾಗೃಹ ಇಲಾಖೆ ನೇಮಕಾತಿ 2026: ಜೈಲರ್, ವಾರ್ಡರ್ ಸೇರಿದಂತೆ ಬರೋಬ್ಬರಿ 869 ಹುದ್ದೆಗಳಿಗೆ ಅರ್ಜಿ ಆಹ್ವಾನ!

Kea warden -jailer - notification

ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಉಳಿದ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ (KK) ವೃಂದ ಎರಡನ್ನೂ ಸೇರಿಸಿ ಒಟ್ಟು 869 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ಹಂಚಿಕೆ ಮತ್ತು ವೇತನ ಶ್ರೇಣಿಯ ವಿವರ:

​ಉಳಿದ ಮೂಲ ವೃಂದದಲ್ಲಿ (RPC) ಒಟ್ಟು 576 ಹುದ್ದೆಗಳು ಖಾಲಿ ಇವೆ. ಇದರಲ್ಲಿ 560 ವಾರ್ಡರ್ (ವೀಕ್ಷಕರು) ಹುದ್ದೆಗಳು ಹಾಗೂ 16 ದ್ವಿತೀಯ ದರ್ಜೆ ಬೋಧಕರು (Instructor Grade-II) ಹುದ್ದೆಗಳು ಸೇರಿವೆ. ಈ ಎರಡೂ ಹುದ್ದೆಗಳಿಗೆ ಮಾಸಿಕ ವೇತನ ಶ್ರೇಣಿ ₹37,500 ರಿಂದ ₹76,100/- ಆಗಿರುತ್ತದೆ.

​ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ (KK) ಒಟ್ಟು 293 ಹುದ್ದೆಗಳು ಲಭ್ಯವಿವೆ. ಇದರಲ್ಲಿ 05 ಜೈಲರ್ ಹುದ್ದೆಗಳಿದ್ದು, ಇವುಗಳಿಗೆ ಮಾಸಿಕ ವೇತನ ಶ್ರೇಣಿ ₹61,300 ರಿಂದ ₹1,12,900/- ನಿಗದಿಯಾಗಿದೆ. ಹಾಗೆಯೇ 275 ವಾರ್ಡರ್ (ವೀಕ್ಷಕರು) ಹುದ್ದೆಗಳು ಮತ್ತು 08 ದ್ವಿತೀಯ ದರ್ಜೆ ಬೋಧಕರ ಹುದ್ದೆಗಳಿದ್ದು, ಇವುಗಳಿಗೆ ₹37,500 ರಿಂದ ₹76,100/- ವೇತನ ಶ್ರೇಣಿ ಇರುತ್ತದೆ. ಜೊತೆಗೆ 05 ವಾರ್ಡರ್ ಕಮ್ ನರ್ಸಿಂಗ್ ಹುದ್ದೆಗಳಿದ್ದು, ಇವುಗಳಿಗೆ ₹34,100 ರಿಂದ ₹67,600/- ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

​ಈ ರೀತಿಯಾಗಿ RPC ವೃಂದದ 576 ಹುದ್ದೆಗಳು ಮತ್ತು KK ವೃಂದದ 293 ಹುದ್ದೆಗಳನ್ನು ಸೇರಿಸಿ, ರಾಜ್ಯಾದ್ಯಂತ ಒಟ್ಟು 869 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ವಿದ್ಯಾರ್ಹತೆಗಳು:

  • ಜೈಲರ್ (05 ಹುದ್ದೆಗಳು): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Bachelor’s Degree) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಸೋಷಿಯಾಲಜಿ, ಸೈಕಾಲಜಿ, ಕ್ರಿಮಿನಾಲಜಿ ಅಥವಾ ಕರೆಕ್ಷನಲ್ ಅಡ್ಮಿನಿಸ್ಟ್ರೇಷನ್ ಪದವೀಧರರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
  • ವಾರ್ಡರ್ (835 ಹುದ್ದೆಗಳು – RPC: 560 + KK: 275): ಕನಿಷ್ಠ ಎಸ್‌ಎಸ್‌ಎಲ್‌ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ದ್ವಿತೀಯ ದರ್ಜೆ ಬೋಧಕರು (24 ಹುದ್ದೆಗಳು – RPC: 16 + KK: 8): ಎಸ್‌ಎಸ್‌ಎಲ್‌ಸಿ ಪಾಸಾಗಿದ್ದು, ಜೊತೆಗೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಾರ್ಪೆಂಟ್ರಿ, ಟೈಲರಿಂಗ್, ಟೆಕ್ಸ್‌ಟೈಲ್/ವೀವಿಂಗ್ ಅಥವಾ ಕಾರ್ಪೆಟ್ ಮೇಕಿಂಗ್‌ನಲ್ಲಿ ಡಿಪ್ಲೊಮಾ ಅಥವಾ ತರಬೇತಿ ಪ್ರಮಾಣಪತ್ರ ಹೊಂದಿರಬೇಕು.
  • ವಾರ್ಡರ್ ಕಮ್ ನರ್ಸಿಂಗ್ (05 ಹುದ್ದೆಗಳು): ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು ಮತ್ತು ಪ್ರಥಮ ಚಿಕಿತ್ಸೆ (First Aid) ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ (5 ವರ್ಷಗಳ ಸಡಿಲಿಕೆ ಅನ್ವಯ):

ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ತುಂಬಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 31 ವರ್ಷ. ಎಸ್‌ಸಿ, ಎಸ್‌ಟಿ, ಪ್ರವರ್ಗ-1, 2A, 2B, 3A, 3B ಅಭ್ಯರ್ಥಿಗಳಿಗೆ ಗರಿಷ್ಠ 33 ವರ್ಷ ನಿಗದಿಪಡಿಸಲಾಗಿದೆ. ಮಾಜಿ ಸೈನಿಕರಿಗೆ ಅವರು ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ವಿನಾಯಿತಿ ಇರುತ್ತದೆ.

ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆ:

​ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಫ್‌ಲೈನ್ ಒಎಂಆರ್ (Offline-OMR) ಮಾದರಿಯಲ್ಲಿ 100 ಅಂಕಗಳ ಬಹು ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ (ಅವಧಿ: 90 ನಿಮಿಷಗಳು). ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ನೆಗೆಟಿವ್ ಮೌಲ್ಯಮಾಪನ ಇರುತ್ತದೆ.

  • RPC ವಾರ್ಡರ್ ಮತ್ತು ಬೋಧಕರ ಪರೀಕ್ಷೆ: 21 ನವೆಂಬರ್ 2026 (ಮಧ್ಯಾಹ್ನ 3:00 ರಿಂದ 4:30).
  • KK ವಾರ್ಡರ್, ಬೋಧಕರು ಮತ್ತು ನರ್ಸಿಂಗ್ ಪರೀಕ್ಷೆ: 22 ನವೆಂಬರ್ 2026 (ಬೆಳಿಗ್ಗೆ 10:30 ರಿಂದ 12:00).
  • KK ಜೈಲರ್ ಪರೀಕ್ಷೆ: 22 ನವೆಂಬರ್ 2026 (ಮಧ್ಯಾಹ್ನ 3:00 ರಿಂದ 4:30).

​ಲಿಖಿತ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ 1:5 ಅನುಪಾತದಲ್ಲಿ ದೇಹದಾರ್ಢ್ಯತೆ (PST) ಮತ್ತು ಸಹಿಷ್ಣುತೆ ಪರೀಕ್ಷೆಗೆ (ET) ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂ.ಮೀ ಎತ್ತರ, 86 ಸೆಂ.ಮೀ ಎದೆ ಸುತ್ತಳತೆ ಇರಬೇಕು. ಮಹಿಳಾ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಕನಿಷ್ಠ 157 ಸೆಂ.ಮೀ ಎತ್ತರ ಹಾಗೂ 46 ಕೆ.ಜಿ ತೂಕ ಇರಬೇಕು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 19 ಸೆಪ್ಟೆಂಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026
  • ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಅಕ್ಟೋಬರ್ 2026
  • ಅಧಿಕೃತ ವೆಬ್‌ಸೈಟ್: cetonline.karnataka.gov.in/kea

Leave a Comment

Your email address will not be published. Required fields are marked *